ಬದಿಯಡ್ಕ: ಸಂಗೀತ ಜಾತಿ, ಧರ್ಮದ ಚೌಕಟ್ಟು ಮೀರಿ ಬೆಳೆದಿರುವ ಕಲಾಪ್ರಕಾರವೆಂಬುದು ಎಡನೀರು ಮಠದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದು ಸಾಬೀತುಪಡಿಸಿದೆ. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ರಾತ್ರಿ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೂರದ ತ್ರಿಶ್ಯೂರ್ ಜಿಲ್ಲೆಯ 'ಪಾಟ್ ಪ್ಯಾಮಿಲಿ'ನಾಮಾಂಕಿತ ತಂಡದೊಂದಿಗೆ ನಿಶಾದ್ ಸುಲ್ತಾನ್ ಕುಟುಂಬವು ಭಕ್ತಿ ಸಂಗೀತದ ಮೂಲಕ ಶ್ರೀಮಠದ ಭಕ್ತಾದಿಗಳು ಹಾಗೂ ಕಲಾಹೃದಯದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ನಿಶಾದ್ ಸುಲ್ತಾನ್ ಅವರು ತನ್ನ ಪತ್ನಿ ಸಜ್ನಾ, ಮಗಳು ದಿಲ್‍ರುಬಾ ನಿಶಾದ್ ಮತ್ತು ಸ್ನೇಹಿತ ಜಯಕುಮಾರ್ ತಂಡದೊಂದಿಗೆ ಸುಮಾರು ಎರಡುವರೆ ತಾಸುಗಳ ಕಾಲ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟದ್ದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮ ಸಾಂಸ್ಕøತಿಕ ಸಾಮರಸ್ಯಕ್ಕೆ ಉದಾಹರಣೆಯಾಯಿತು.
ಸಂಗೀತಕ್ಕೆ ಭಾಷೆ ಅಥವಾ ಧರ್ಮವಿಲ್ಲ ಮತ್ತು ಅದು ಮಾನವ ಆತ್ಮದೊಂದಿಗೆ ನೇರವಾಗಿ ಸಂವಾದ ನಡೆಸುತ್ತದೆ ಎಂಬುದನ್ನು ಈ ಕಾರ್ಯಕ್ರಮವು ಸಾಬೀತುಪಡಿಸಿತ್ತು.
'ಕುಡಚಾದ್ರಿಯಿಲ್ ಕುಡಿಕೊಳ್ಳುಂ ಮಹೇಶ್ವರಿ...ಯಿಂದ ತೊಡಗಿ ಹರಿವರಾಸನಂ ವರೆಗೆ ಸುಮಾರು 25ರಷ್ಟು ಹಾಡುಗಳನ್ನು ನಿರರ್ಗಳವಾಗಿ ಪಾಟ್ ಫ್ಯಾಮಿಲಿ ತಂಡದ ಸದಸ್ಯರು ಹಾಡಿ ರಂಜಿಸಿದರು.
ನಿಶಾದ್ ಸುಲ್ತಾನ್ ತನ್ನ ಕುಟುಂಬವನ್ನು ಸಂಪೂರ್ಣವಾಗಿ ಸಂಗೀತಕ್ಕೆ ಮೀಸಲಿಟ್ಟಿದ್ದಾರೆ. ತನ್ನ ಮೂರು ಮಂದಿ ಮಕ್ಕಳಿಗೆ ಪ್ರತಿ ದಿನ ಸಂಗೀತ ಶಿಕ್ಷಕರ ಮೂಲಕ ಸಂಗೀತ ಪಾಠವನ್ನೂ ಹೇಳಿಕೊಡುತ್ತಿದ್ದಾರೆ.



