ಸನಾ: ಇಸ್ರೇಲ್ ಪಡೆಗಳು ಯೆಮೆನ್ ರಾಜಧಾನಿ ಸನಾ ಮೇಲೆ ಭಾನುವಾರ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಮೃತಪಟ್ಟು, ಇತರ 35 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಬೆಂಬಲಿತ ಹುಥಿ ಬಂಡುಕೋರರು ಹೇಳಿದ್ದಾರೆ.
ಬಂಡುಕೋರರ ಹಿಡಿತದಲ್ಲಿರುವ ಸನಾ ನಗರದ ಆಗಸದಲ್ಲಿ ಬೃಹದಾಕಾರದ ಬೆಂಕಿ ಚೆಂಡುಗಳು ಅಬ್ಬರಿಸುತ್ತಿರುವುದು, ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಎಎಫ್‌ಪಿ ವರದಿ ಮಾಡಿದೆ.
'ಸನಾದಲ್ಲಿರುವ ಹುಥಿ ಬಂಡುಕೋರರ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅಧ್ಯಕ್ಷರ ಅರಮನೆ, ಎರಡು ವಿದ್ಯುತ್ ಸ್ಥಾವರಗಳು ಹಾಗೂ ಇಂಧನ ಸಂಗ್ರಹಾಗಾರ ಮೇಲೂ ದಾಳಿ ಮಾಡಲಾಗಿದೆ' ಎಂದು ಇಸ್ರೇಲ್ ಸೇನೆ ಹೇಳಿದೆ.




