ತಾಯಿಯ ಹಾಲು ಶಿಶುಗಳಿಗೆ ಅಮೃತವಿದ್ದಂತೆ. ಇದು ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಿಂದ ಶಿಶುಗಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ಹೊಂದಿರುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅತ್ಯುತ್ತಮವಾದ ಪೋಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಎದೆಹಾಲು ಮಗುವಿನ ಅರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ್ದು, ಇದು ಮಗುವಿನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ನಡುವಿನ ವಾತ್ಸಲ್ಯ, ಬಾಂಧವ್ಯ ಮತ್ತು ಪ್ರೀತಿ ಸಹ ಹೆಚ್ಚಾಗುತ್ತದೆ. ತಾಯಿಯ ಎದೆಹಾಲಿನ ಮಹತ್ವ ಮತ್ತು ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಆಗಸ್ಟ್ ಮೊದಲ ವಾರ ಅಂದರೆ ಆಗಸ್ಟ್ 1 ರಿಂದ 7 ರ ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು (Breastfeeding Week) ಆಚರಿಸಲಾಗುತ್ತದೆ.
ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಇತಿಹಾಸ:
ಸ್ತನ್ಯಪಾನದ ಪ್ರಯೋಜನಗಳು ಮತ್ತು ಮಗುವಿಗೆ ಹಾಲುಣಿಸಲು ತಾಯಂದಿರನ್ನು ಪ್ರೇರೇಪಿಸುವ ಸಲುವಾಗಿ 1991ರಲ್ಲಿ ವರ್ಲ್ಡ್ ಅಲೈಯನ್ಸ್ ಫಾರ್ ಬ್ರೆಸ್ಟ್ ಫೀಡಿಂಗ್ ಆಕ್ಷನ್ (WABA) ಅನ್ನು ರಚಿಸಲಾಯಿತು. ಆರಂಭದಲ್ಲಿ ವರ್ಷಕ್ಕೆ ಒಂದು ದಿನ ಸ್ತನ್ಯಪಾನ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಈ ವಿಷಯವು ಸಾಮಾನ್ಯ ಜೀವನ ಮತ್ತು ಮಕ್ಕಳ ಆರೋಗ್ಯದಂತಹ ಸಮಸ್ಯೆಗಳಿಗೆ ಸಂಬಂಧಿಸಿರುವುದರಿಂದ ಅದರ ಉಪಯುಕ್ತತೆ ಮತ್ತು ಅಗತ್ಯವನ್ನು ಪರಿಗಣಿಸಿ, ಒಂದು ವಾರಗಳ ಕಾಲ ಈ ಜಾಗೃತಿ ಕಾರ್ಯವನ್ನು ಆಚರಿಸಲು ನಿರ್ಧರಿಸಲಾಯಿತು. ಇದಕ್ಕೆ ವಿಶ್ವ ಸ್ತನ್ಯಪಾನ ಸಪ್ತಾಹ (World Breastfeeding Week) ಎಂದು ಹೆಸರಿಡಲಾಯಿತು. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಮೊದಲ ಬಾರಿಗೆ 1992ರಲ್ಲಿ ಆಯೋಜಿಸಲಾಯಿತು. ಶಿಶುಗಳಿಗೆ ಹಾಲುಣಿಸಲು ತಾಯಂದಿರನ್ನು ಉತ್ತೇಜಿಸುವುದು ಮತ್ತು ಪ್ರಪಂಚದಾದ್ಯಂತ ಮಕ್ಕಳ ಆರೋಗ್ಯವನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇಂದು ನೂರಕ್ಕೂ ಹೆಚ್ಚು ದೇಶಗಳು ಈ ಸಾಪ್ತಾಹಿಕ ಜಾಗೃತಿ ಕಾರ್ಯವನ್ನು ಆಚರಿಸಲಾಗುತ್ತಿದೆ.
ವಿಶ್ವ ಸ್ತನ್ಯಪಾನ ವಾರದ ಮಹತ್ವ:
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಪ್ರಕಾರ, ಶಿಶುಗಳನ್ನು ಆರೋಗ್ಯವಾಗಿಡಲು ಸ್ತನ್ಯಪಾನವು ಅತ್ಯುತ್ತಮ ಮಾರ್ಗವಾಗಿದೆ. ಇದು ಶಿಶುಗಳಿಗೆ ಪೋಷಣೆ ನೀಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ, ಅತಿಸಾರ ಮತ್ತು ನ್ಯುಮೋನಿಯಾದಂತಹ ರೋಗಗಳನ್ನು ಸಹ ತಡೆಯುತ್ತದೆ. ಅಲ್ಲದೆ, ಇದು ತಾಯಂದಿರಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ ಸ್ತನ್ಯಪಾನ ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಸ್ತನ್ಯಪಾನದ ಈ ಮಹತ್ವದ ಬಗ್ಗೆ ತಿಳಿಸುವುದು ಸ್ತನ್ಯಪಾನ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.




