ತಿರುವನಂತಪುರ: ಕೇರಳದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಹೆಚ್ಚುವರಿ ಅಂಕಗಳನ್ನು ನೀಡಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಇಂದು (ಬುಧವಾರ) ತಿಳಿಸಿದ್ದಾರೆ.
ಪುಸಕ್ತಗಳು, ಪತ್ರಿಕೆಗಳನ್ನು ಓದುವುದು ಸೇರಿದಂತೆ ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗಾಗಿ ತರಗತಿಯಲ್ಲಿ ಪಾಠದ ಅವಧಿಯನ್ನು ಮೀಸಲಿಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಓದುವಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು ಕೈಪಿಡಿಯನ್ನು ಸಿದ್ಧಪಡಿಸಲಾಗುವುದು. ಅಧ್ಯಾಪಕರಿಗೆ ತರಬೇತಿಯನ್ನು ನೀಡಲಾಗುವುದು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ವಾರ್ಷಿಕ ಶಾಲಾ ಕಲಾ ಉತ್ಸವವಾದ 'ಕಲೋತ್ಸವ'ದಲ್ಲೂ ಓದುವುದಕ್ಕೆ ಸಂಬಂಧಿಸಿದ ವಿಭಾಗವನ್ನು ಸ್ಪರ್ಧೆಯಾಗಿ ಏರ್ಪಡಿಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.




