ಕಾಸರಗೋಡು: ಜಿಲ್ಲೆಯ ವಿವಿಧೆಡೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಜಾಗ ಕಬಳಿಸಿ ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ತಾತ್ಕಾಲಿಕ ಶೆಡ್‍ಗಳ ನಿರ್ಮಾಣದೊಂದಿಗೆ ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು, ಕೆಲವೆಡೆ ಸಂಘರ್ಷಕ್ಕೂ ಕಾರಣವಾಗುತ್ತಿದೆ. ಚೆರ್ಕಳ-ಕಲ್ಲಡ್ಕ ರಸ್ತೆಯ ಪೆರ್ಲ ಹಳೇ ಚೆಕ್‍ಪೋಸ್ಟ್ ಕಟ್ಟಡದ ಸನಿಹ ರಸ್ತೆ ಅಂಚಿಗೆ ಲಾಟರಿ ವ್ಯಾಪಾರಿಯೊಬ್ಬರು ಅಳವಡಿಸಿರುವ ಸಣ್ಣ ಗೂಡಂಗಡಿ ತೆರವುಗೊಳಿಸಬೇಕೆಂಬ ನಾಗರಿಕರ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ಇಲ್ಲೇ ಸನಿಹ ರಸ್ತೆ ಅಂಚಿಗೆ ಬೃಹತ್ ತಾತ್ಕಾಲಿಕ ಕಟ್ಟಡ ತಲೆಯೆತ್ತುತ್ತಿದೆ.
ಮಂದಿ ರಸ್ತೆ ಅಂಚಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿರುವುದರಿಂದ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯುಂಟಾಗುತ್ತಿದೆ.
ಜಿಲ್ಲೆಯ ಬಹುತೇಕ ಕಡೆ ಕಟ್ಟಡಗಳ ಆವರಣಗೋಡೆ ಮಾನದಂಡ ಉಲ್ಲಂಘಿಸಿ ರಸ್ತೆ ಅಂಚಿಗೇ ನಿರ್ಮಿಸಲಾಗುತ್ತಿದೆ. ರಾಷ್ಟ್ರ, ರಾಜ್ಯ ಹೆದ್ದಾರಿ, ಪಿಡಬ್ಲುಡಿ, ಜಿಪಂ, ಪಂಚಾಯಿತಿ ರಸ್ತೆಗಳ ಅಂಚಿಗೆ ತಾತ್ಕಾಲಿಕ ನಿರ್ಮಾಣಗಳು ನಿಗದಿತ ಅಂತರದಲ್ಲಿ ನಿರ್ಮಿಸಬೇಕೆಂಬ ನಿಬಂಧನೆಯಿದ್ದರೂ, ಇದ್ಯಾವುದೂ ಪಾಲನೆಯಾಗುತ್ತಿಲ್ಲ.
ಈಗಾಗಲೇ ಕಾಸರಗೋಡು ಹಳೇ ಬಸ್ ನಿಲ್ದಾಣದ ಬೀದಿಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದಲ್ಲಿ ವ್ಯಾಪಾರಕ್ಕೆ ಅವಕಾಶಮಾಡಿಕೊಡಲಾಗಿದೆ. ವಿಪರ್ಯಾಸವೆಂದರೆ ಬೀದಿಬದಿ ವ್ಯಾಪಾರ ನಡೆಸುತ್ತಿದ್ದವರು ನಗರಸಭೆ ತಮಗಾಗಿ ನಿರ್ಮಿಸಿಕೊಟ್ಟಿರುವ ಅಂಗಡಿ ಕೊಠಡಿಗಳಿಗೆ ಶಿಫ್ಟ್ ಆಗುತ್ತಿದ್ದಂತೆ, ಬೀದಿ ಬದಿ ಬೇರೊಬ್ಬರು ಬಂದು ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ಅನಧಿಕೃತ ವ್ಯಾಪಾರಿಗಳನ್ನು ತೆರವುಗೊಳಿಸುವ ಬಗ್ಗೆ ಸ್ಥಳೀಯಾಡಳಿತ ತೋರುವ ಇಬ್ಬಗೆ ಧೋರಣೆ ವ್ಯಾಪಕ ಸಮಸ್ಯೆಗೆ ಕಾರಣವಾಗುತ್ತಿದೆ.
ಈ ರೀತಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವ್ಯಾಪಾರ ನಡೆಸುತ್ತಿರುವವರು, ಮುಂದೊಂದು ದಿನ ಅಲ್ಲಿಂದ ತಮ್ಮನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದರೆ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಬೇಡಿಕೆಯಿಡುತ್ತಿದ್ದಾರೆ.
ಎಣ್ಮಕಜೆ ಪಂಚಾಯಿತಿಯ ಪೆರ್ಲ ಆಸುಪಾಸು ಇದೇ ರೀತಿಯ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಾಗಿದೆ. ಇಡಿಯಡ್ಕದಿಂದ ತೊಡಗಿ ಪೆರ್ಲ ಪೇಟೆಯಿಂದ ಅನತಿ ದೂರದಲ್ಲಿರುವ ಮತ್ರ್ಯ ವರೆಗೂ ರಸ್ತೆ ಅಂಚಿಗೆ ಹಲವಾರು ಅನಧಿಕೃತ ಶೆಡ್‍ಗಳಲ್ಲಿ ವ್ಯಾಪಾರಿ ಸಂಸ್ಥೆಗಳು ಕಾರ್ಯಾಚರಿಸುತ್ತಿದೆ.
ಅನಧಿಕೃತ ವ್ಯಾಪಾರದ ವಿರುದ್ಧ ಪರವಾನಗಿ ಪಡೆದು ವ್ಯಾಪಾರಿವಹಿವಾಟು ನಡೆಸುತ್ತಿರರುವ ವ್ಯಾಪಾರಿಗಳೂ ಧ್ವನಿಯೆತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದಾಗಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಯೂನಿಟ್ ಅಧ್ಯಕ್ಷ ರಾಜಾರಾಮ ಶೆಟ್ಟಿ ಕಾಟುಕುಕ್ಕೆ ತಿಳಿಸುತ್ತಾರೆ. ಪೇಟೆಯಲ್ಲಿ ಮೀನು ಮಾರಾಟಕ್ಕಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಇದರಿಂದ ನಾನಾ ಕಡೆ ರಸ್ತೆ ಅಂಚಿಗೇ ಮೀನು ಮಾರಾಟ ನಡೆಸಲಾಗುತ್ತಿದೆ.
ಅಭಿಮತ:
-ಪೆರ್ಲ ಚೆಕ್‍ಪೋಸ್ಟ್ ಸನಿಹ ಅಬಧಿಕೃತ ವ್ಯಾಪಾರಿ ಸಂಸ್ಥೆಗಳ ಬಗ್ಗೆ ದೂರು ಲಭಿಸಿದ್ದು, ಈ ಬಗ್ಗೆ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಅಳತೆಮಾಡಿ ನೀಡಲು ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಜಾಗದಲ್ಲಿ ಅನಧಿಕೃತ ಕಟ್ಟಡಗಳಿದ್ದಲ್ಲಿ, ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಭರತನ್ ಆರ್, ಸಹಾಯಕ ಅಭಿಯಂತ
ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ






