ಕಾಸರಗೋಡು: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಪಾಯ ತಂದೊಡ್ಡುತ್ತಿದ್ದ ಮರದ ರೆಂಬೆಯನ್ನು ಅದೇ ಶಾಲಾ ಶಿಕ್ಷಕರೊಬ್ಬರು ಕಡಿದು ತೆರವುಗೊಳಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಎದುರಿಸುತ್ತಿದ್ದ ಆತಂಕ ದೂರ ಮಾಡಿದ್ದಾರೆ. ಶಾಲಾ ಶಿಕ್ಷಕ, ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಪೆರ್ಲ ನಿವಾಸಿ ರಂಜಿತ್ ಎ.ಎಸ್ ಅವರು ಶಾಲೆಗಾಗಿ ತಮ್ಮ ಸೇವೆ ಮುಡಿಪಾಗಿಟ್ಟವರು.
ತಾನು ಕಲಿಸುವ ಶಾಲೆಯ ಬಗ್ಗೆ ಹೊಂದಿರುವ ಹೆಚ್ಚಿನ ಕಾಳಜಿ ಹಗೂ ಅಲ್ಲಿನ ವಿದ್ಯಾರ್ಥಿಗಳಿಗೆ ಎದುರಾಗಬಹುದಾದ ಸಮಸ್ಯೆಯನ್ನು ಮನಗಂಡ ಈ ಶಿಕ್ಷಕ ಖುದ್ದಾಗಿ ಮರವೇರಿ ರೆಂಬೆ ಕಡಿದುರುಳಿಸಲು ಮುಂದಾಗಿದ್ದರು. ಶಾಲೆಗೆ ರಜೆಯಿರುವ ದಿನ ರಂಜಿತ್ ಅವರು ತಮ್ಮ ಸೇವೆಯನ್ನು ನಡೆಸಿಕೊಟ್ಟಿದ್ದಾರೆ. ಮರ ಕಡಿಯಲು ಹೊರಗಿನಿಂದ ಯಾರನ್ನಾದರೂ ಕರೆಸಿದಲ್ಲಿ, ವೇತನವಾಗಿ ಬಹಳಷ್ಟು ಖರ್ಚು ನಡೆಸಬೇಕಾಗುತ್ತದೆ. ಆದರೆ ಶಾಲೆಯಲ್ಲಿ ಇದಕ್ಕಾಗಿ ಪ್ರತ್ಯೇಕ ನಿಧಿ ಇಲ್ಲದ ಕಾರಣ ಈ ಹಣ ಹೊಂದಿಸುವುದು ಕಷ್ಟಸಾಧ್ಯವಾಗುತ್ತಿರುವುದನ್ನು ಮನಗಂಡ ಶಿಕ್ಷಕ ರಂಜಿತ್ ಅವರು, ಶಾಲಾ ಕಟ್ಟಡಕ್ಕೆ ಅಪಾಯ ತಂದೊಡ್ಡುತ್ತಿದ್ದ ಮರದ ರೆಂಬೆಯನ್ನು ಸ್ವತ: ಮರವೇರಿ ಕಡಿದು ಅಪಾಯ ನಿವಾರಿಸಿದ್ದಾರೆ. ಶಾಲೆ ಮೇಲೆ ಚಾಚಿದ್ದ ಮರದ ರೆಂಬೆಯನ್ನು ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಅಪಾಯವಾಗದ ರೀತಿಯಲ್ಲಿ ತೆರವುಗೊಳಿಸಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಟ್ಟುಸಿರು ಬಿಡುವಂತಾಗಿದೆ. ಶಿಕ್ಷಕರೊಬ್ಬರ ಈ ಸೇವಾ ಮನೋಭಾವ ಶಾಲೆಗೆ ಮಾತ್ರ ಸೀಮಿತವಾಗಿರದೆ, ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಮನೆಗಳ ಮೇಲೆ ಮರ ಉರುಳಿದಲ್ಲೂ ತೆರವುಗೊಳಿಸಲು ಧಾವಿಸುತ್ತಾರೆ. ಈ ಮೂಲಕ ತಮ್ಮ ಸೇವೆಯನ್ನು ಇವರು ವಿಸ್ತರಿಸಿದ್ದಾರೆ. ಆರಂಭದಲ್ಲಿ ಅಬಕಾರಿ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರೂ, ತಮ್ಮ ನೆಚ್ಚಿನ ಅಧ್ಯಾಪನ ವೃತ್ತಿಯೆಡೆಗೆ ಗಮನಹರಿಸಿದ ರಂಜಿತ್ ಶಿಕ್ಷಕರಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ, 2020 ರಲ್ಲಿ ಕಾಸರಗೋಡು ಸರ್ಕಾರಿ ಯುಪಿ ಶಾಲೆಗೆ ಸೇರ್ಪಡೆಗೊಂಡಿದ್ದರು.


