ನವದೆಹಲಿ: ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯ ಸದಸ್ಯತ್ವಕ್ಕೆ ನೈತಿಕತೆ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
'ಮತದಾರರ ಪಟ್ಟಿಗೆ ತಪ್ಪಾಗಿ ಹೆಸರು ಸೇರಿಸಲಾದ ಮತ್ತು ಪಟ್ಟಿಯಿಂದ ಕೈಬಿಡಲಾದ ಕುರಿತು ವಿಸ್ತೃತ ಮಾಹಿತಿಗಳನ್ನು ಚುನಾವಣಾ ಆಯೋಗದೊಂದಿಗೆ ಹಂಚಿಕೊಳ್ಳಬೇಕು.
ನಿಮ್ಮ (ರಾಹುಲ್ ಗಾಂಧಿ) 'ಮತ ಕಳವು' ವಿಶ್ಲೇಷಣೆಯು ಸತ್ಯವಾಗಿದ್ದರೆ ಪ್ರಮಾಣಪತ್ರಕ್ಕೆ ಸಹಿ ಹಾಕಬೇಕಿತ್ತು. ಆದರೆ, ನೀವು ಸಹಿ ಹಾಕದೆ ಪಲಾಯನ ಮಾಡಿದ್ದೀರಿ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಟೀಕಿಸಿದ್ದಾರೆ.
'ನೀವು (ರಾಹುಲ್ ಗಾಂಧಿ) ಮಾಧ್ಯಮಗಳ ಮುಂದೆ ಆಧಾರರಹಿತ ಆರೋಪಗಳನ್ನು ಮಾಡಿದ್ದೀರಿ. ಆದರೆ, ಸಾಂವಿಧಾನಿಕ ಸಂಸ್ಥೆಯು (ಚುನಾವಣಾ ಆಯೋಗ) ಪುರಾವೆ ಮತ್ತು ಪ್ರಮಾಣಪತ್ರ ಕೇಳಿದಾಗ ಅದನ್ನು ನೀಡಲು ನಿರಾಕರಿಸುತ್ತೀರಿ' ಎಂದು ಭಾಟಿಯಾ ಕುಟುಕಿದ್ದಾರೆ.
'ಚುನಾವಣಾ ಆಯೋಗದ ಪ್ರಾಮಾಣಿಕತೆಯ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜತೆಗೆ, ಹಲವು ವರ್ಷಗಳಿಂದ ಚುನಾವಣಾ ಆಯೋಗವು ನಿಷ್ಪಕ್ಷಪಾತ ಸಂಸ್ಥೆಯಾಗಿ ಖ್ಯಾತಿಯನ್ನು ಗಳಿಸಿದೆ ಎಂಬುದು ದಾಖಲೆಯ ವಿಷಯವಾಗಿದೆ' ಎಂದೂ ಭಾಟಿಯಾ ಅವರು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪಿನ ಆಯ್ದ ಭಾಗಗಳನ್ನು ಉಲ್ಲೇಖಿಸಿದ್ದಾರೆ.
'ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಅವರು ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಮಾಡಿದ ಅವಲೋಕನಗಳನ್ನು ನಂಬದಿದ್ದರೆ, ನೈತಿಕತೆ ಆಧಾರದ ಮೇಲೆ ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ. ಬಳಿಕ ಸುಪ್ರೀಂ ಕೋರ್ಟ್, ಹೈಕೋರ್ಟ್ ಅಥವಾ ಜನರ ಬಳಿಗೆ ಹೋಗಲಿ' ಎಂದು ಭಾಟಿಯಾ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿರುವುದರಿಂದ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಸಹ ಕೂಡಲೇ ರಾಜೀನಾಮೆ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.




