ನವದೆಹಲಿ: ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನವನ್ನು (Independence Day) ಆಚರಿಸಲಾಗುತ್ತಿದೆ. ದೇಶಾದ್ಯಂತ ಸರ್ಕಾರಿ ಕಚೇರಿಗಳಲ್ಲಿ, ಶಾಲೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೇ ಮನೆ ಮನೆಗಳಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ವಿಜೃಂಭನೆಯಿಂದ ಆಚರಿಸಲಾಗುತ್ತಿದೆ.
ಹಲವೆಡೆ ದೇಶ ಭಕ್ತಿ ಸಾರುವ ಸಾಂಸ್ಕೃತಿ ಕಾರ್ಯಕ್ರಮಗಳು, ಚಿತ್ರ ಕಲೆಗಳು ಗಮನ ಸೆಳೆಯುತ್ತಿವೆ. ಇದೇ ಸಂದರ್ಭ ಡೆಲಿವರಿ ಬಾಯ್ (Delivery Boy) ಒಬ್ಬ ಗ್ರಾಹಕರಿಗೆ ತ್ರಿವರ್ಣ ಧ್ವಜಗಳನ್ನು (Tricolor Flag) ಹಂಚುವ ಮೂಲಕ ದೇಶಭಕ್ತಿ ಮೆರೆದಿದ್ದಾನೆ.
ಹೌದು, ದೆಹಲಿಯ ಡೆಲಿವರಿ ಬಾಯ್ ಒಬ್ಬ ಗ್ರಾಹಕರಿಗೆ ಆಹಾರ ಡೆಲಿವರಿ ಮಾಡುವ ಜೊತೆಗೆ ಅವರಿಗೆ ರಾಷ್ಟ್ರಧ್ವಜವನ್ನು ಹಂಚಿ, ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾನೆ. ಈ ಮೂಲಕ ಗ್ರಾಹಕರ ಮೊಗದಲ್ಲಿ ಸಂತಸದ ಛಾಯೆಯ ಜೊತೆಗೆ ದೇಶಭಕ್ತಿ ಹರಡಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆತನ ನರಗಳಲ್ಲಿ ನಿಜವಾದ ದೇಶಭಕ್ತಿ ಹರಿಯುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿದ್ದ ಸೈನಿಕರಿಗೆ ವಿಶೇಷವಾದ ಗೌರವ ಸಲ್ಲಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಬಳಿಕ ಆಪರೇಷನ್ ಸಿಂಧೂರ್ ಬ್ಯಾನರ್ ಹೊತ್ತಿದ್ದ ಹೆಲಿಕಾಪ್ಟರ್ ಹಾರಾಟ ಗಮನ ಸೆಳೆದಿದೆ. ಪ್ರಧಾನಿ ಮೋದಿ ಅವರು ಕೂಡಾ ತಮ್ಮ ಭಾಷಣದಲ್ಲಿ ಗಡಿ ಕಾಯುವ ಧೈರ್ಯಶಾಲಿ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಇನ್ನು ಇನ್ನು 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿದ ಮರಳು ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಇದರ ಫೋಟೋ ಹಂಚಿಕೊಂಡು ಬರೆದಿರುವ ಸುದರ್ಶನ್, ಸ್ವಾತಂತ್ರ್ಯ ದಿನದ ಸಂದರ್ಭ ಆಪರೇಷನ ಸಿಂಧೂರ್ ಕಲಾಕೃತಿಯು ಕಾರ್ಯಾಚರನೆಯ ವೇಳೆ ಸಶಸ್ತ್ರ ಪಡೆಗಳು ತೋರಿದ ದಿಟ್ಟ ಹೋರಾಟವನ್ನು ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.
ಟೆಕ್ ದೈತ್ಯ ಗೂಗಲ್ ಕೂಡಾ ಭಾರತದ ಸ್ವಾತಂತ್ರ್ಯ ದಿನಕ್ಕೆ ವಿಶೇಷ ಡೂಡಲ್ ಮೂಲಕ ಶುಭಾಷಯ ಕೋರಿದೆ. ಡಿಜಿಟಲ್ ಕಲಾಕೃತಿಯಲ್ಲಿ ಭಾರತದ ಸಾಧನೆಯನ್ನು ಚಿತ್ರೀಕರಿಸಿರುವುದನ್ನು ಪ್ರದರ್ಶಿಸಿದೆ. ಅದರಲ್ಲಿ ಬಾಹ್ಯಾಕಾಶ ಯಾನ, ಚೆಸ್, ಸಿನಿಮಾ ಕ್ಷೇತ್ರದ ಸಾಧನೆ ಸೇರಿ ಒಟ್ಟು ಆರು ರೀತಿಯ ಚಿತ್ರಗಳಲ್ಲಿ ಡೂಡಲ್ ರಚಿಸಲಾಗಿದೆ. ಬುಮ್‌ರಾಂಗ್ ಸ್ಟುಡಿಯೋದ ಕಲಾವಿದ ಮಕರಂದ್ ನರ್ಕರ್ ಮತ್ತು ಸೋನಾಲ್ ವಾಸವೆ ಅವರು ಈ ಡೂಡಲ್ ತಯಾರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.




