ಕಾಸರಗೋಡು: ಸರ್ಕಾರ ಹಾಗೂ ನಗರಸಭೆ ನಡುವಿನ ಹೊಂದಾಣಿಕೆ ಕೊರತೆಯಿಂದ ಕಾಸರಗೋಡು ಜನರಲ್ ಆಸ್ಪತ್ರೆ ರೋಗಿಗಳಿಗೆ ವಿತರಿಸುವ ಹಾಲು ಕಳೆದ ಎರಡು ಮೂರು ದಿವಸಗಳಿಂದ ಸ್ಥಗಿತಗೊಂಡಿದೆ. ಆಸ್ಪತ್ರೆಗೆ ಹಾಲು ಪೂರೈಸುತ್ತಿರುವ 'ಮಿಲ್ಮಾ'ಸಂಸ್ಥೆಗೆ ಏಳುವರೆ ಲಕ್ಷ ರೂ. ನೀಡಲು ಬಾಕಿಯಿರುವುದರಿಂದ ಸಂಸ್ಥೆ ಹಾಲು ಪೂರೈಕೆ ಸ್ಥಗಿತಗೊಳಿಸಿದೆ. ಜನರಲ್ ಆಸ್ಪತ್ರೆಗೆ ಮಿಲ್ಮಾ ಸಂಸ್ಥೆ ಪ್ರತಿ ದಿನ 45ಲೀ. ಹಾಲು ಪೂರೈಸುತ್ತಿದೆ. ಈ ಮೊತ್ತವನ್ನು ಒಂದು ವರ್ಷದ ಹಿಂದಿನ ವರೆಗೆ ಟ್ರೆಶರಿಯಿಮದ ಮಿಲ್ಮಾ ಸಂಸ್ಥೆಗೆ ಬಿಡುಗಡೆಮಾಡಲಾಘುತ್ತಿತ್ತು.2025ರ ಫೆಬ್ರವರಿಯಿಂದ ಈ ಹಣ ಬಿಡುಗಡೆಯಾಗಿರಲಿಲ್ಲ. ಹಾಲು ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಃಇತಿ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಜನರಲ್ ಆಸ್ಪತ್ರೆ ಕಾಸರಗೋಡು ನಗರಸಭಾ ಆಡಳಿತದ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವುದರಿಂದ ಈ ಮೊತ್ತವನ್ನು ನಗರಸಭೆಯಿಂದಲೇ ವಸೂಲಿ ಮಾಡುವಂತೆ ಸರ್ಕಾರ ಮಿಲ್ಮಾ ಸಂಸ್ಥೆಗೆ ತಿಳಿಸಿದೆ. ಜನರಲ್ ಆಸ್ಪತ್ರೆ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಹಾಲು ಪೂರೈಕೆಗಾಗಿ ಬಾಕಿಯಿರುವ ಹಣ ಪೂರೈಸುವ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂಬುದು ನಗರಸಭಾ ಅಧ್ಯಕ್ಷರ ವಾದ. ನಗರಸಭೆ ಹಣ ಪೂರೈಸಬೇಕಾದಲ್ಲಿ, ಇದಕ್ಕಾಗಿ ಪ್ರತ್ಯೇಕ ಯೋಜನೆ ತಯಾರಿಸಬೇಕಾಗಿದೆ. ಯೋಜನೆ ತಯಾರಿಸಿ, ಇದಕ್ಕೆ ಸರ್ಕಾರದ ಅಂಗೀಕಾರ ಲಭಿಸಬೇಕಾದರೆ ಮತ್ತಷ್ಟು ಸಮಯ ತಗಲಲಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬುದಾಗಿ ನಗರಸಭಾಧ್ಯಕ್ಷ ಅಬ್ಬಸ್ ಬೀಗಂ ತಿಳಿಸುತ್ತಾರೆ.
ಕಳೆದ ಕೆಲವು ದಿವಸಗಳಿಂದ ಹಾಲು ವಿತರಣೆ ಮೊಟಕುಗೊಂಡಿದೆ. ಇದರಿಂದ ಹಲವು ಮಂದಿ ರೋಗಿಗಳಿಗೆ ಸಮಸ್ಯೆ ಉಂಟಾಗಿದೆ. ನಗರಸಭಾ ಆಡಳಿತ ಬದಲಿ ವ್ಯವಸ್ಥೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಸರ್ಕಾರಿ ಜನರಲ್ ಆಸ್ಪತ್ರೆ ಮೇಲ್ವಿಚರಕ ಡಾ. ಶ್ರೀಕುಮಾರ್ ತಿಳಿಸಿದ್ದಾರೆ.




