ಕಾಸರಗೋಡು: ಲೈಂಗಿಕ ದೌರ್ಜನ್ಯದಿಂದ 17ರ ಹರೆಯದ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿ, ಈ ಮೂಲಕ ಹುಟ್ಟಿದ ಮಗುವನ್ನು ಅನಾಥಾಲಯವೊಂದಕ್ಕೆ ಹಸ್ತಾಂತರಿಸುವ ಮಧ್ಯೆ ವಿಷಯ ಬಹಿರಂಗಗೊಂಡು, ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿ ಮಗುವಿಗೆ ಜನ್ಮ ನೀಡಲು ಕಾರಣನಾದ ಈಕೆಯ ಸಂಬಂಧಿಯಾಗಿರುವ ಯುವಕನ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡು ಸೆರೆಮನೆಗೆ ತಳ್ಳಿದ್ದಾರೆ.
ಕುಂಬ್ಡಾಜೆ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಪತ್ನಿ, ಮೂವರು ಮಕ್ಕಳನ್ನು ಹೊಂದಿರುವ 39ರ ಹರೆಯದ ವ್ಯಕ್ತಿ ಬಂಧಿತ. ಸಂತ್ರಸ್ತ ಬಾಲಕಿಯ ತಾಯಿಯ ಸಮೀಪ ಸಂಬಂಧಿಯಾಗಿರುವ ಈತ, ಪ್ಲಸ್‍ಟು ಶಿಕ್ಷಣದ ನಂತರ ಈತನ ಮನೆಯಲ್ಲಿ ತಂಗಿದ್ದ ಬಾಲಕಿಗೆ ದೌರ್ಜನ್ಯವೆಸಗಿದ್ದಾನೆ.
ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಸನಿಹದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ವೈದ್ಯರು ಸ್ಕ್ಯಾನಿಂಗ್ ನಡೆಸಲು ಶಿಫಾರಸುಮಾಡಿದ್ದರು. ಅಲ್ಲಿಂದ ಬೇರೊಂದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿ ಎಂದು ತಿಳಿಸಲಾಗಿತ್ತು.ಈಕೆ ವಿವಾಹಿತೆಯೆಂದೂ, 19ವರ್ಷ ಪ್ರಾಯವಾಗಿರುವುದಾಗಿಯೂ ತಿಳಿಸಿದ್ದ ಹಿನ್ನೆಲೆಯಲ್ಲಿ ವೈದ್ಯರಿಗೆ ಸಂಶಯ ಬಂದಿರಲಿಲ್ಲ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬಹಿರಂಗಗೊಳ್ಳದಿರಲು, ಈತ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ವಾಟ್ರಸ್‍ಗೆ ವಾಸ್ತವ್ಯ ಬದಲಾಯಿಸಿ, ಅಲ್ಲಿದ್ದುಕೊಂಡು ಕಾಞಂಗಾಡಿನ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದ್ದನು. ಅಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವನ್ನು ತಮ್ಮಲ್ಲಿ ಇರಿಸಿಕೊಂಡಲ್ಲಿ ಸಮಸ್ಯೆ ಎದುರಾಗುವುದನ್ನು ಮನಗಂಡು ನೀಲೇಶ್ವರದ ಅನಾಥಾಲಯವೊಂದಕ್ಕೆ ಮಗುವನ್ನು ನೀಡಲು ಮುಂದಾಗಿದ್ದನು. ಈತನ ವರ್ತನೆಯಿಂದ ಸಂಶಯಗೊಂಡ ಅನಾಥಾಲಯ ಅಧಿಕಾರಿಗಳು, ಈ ಬಗ್ಗೆ ಚೈಲ್ಡ್ ವೆಲ್ಫೇರ್ ಸಮಿತಿಗೆ ನೀಡಿದ ಮಾಹಿತಿಯನ್ವಯ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ.




