ಕಾಸರಗೋಡು: ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಿಪಿಐ ಪಕ್ಷದ ಮುಖಂಡ ಎಂ. ನಾರಾಯಣನ್(69)ಮಂಗಳವಾರ ಆಸ್ಪತ್ರೆಯಲ್ಲಿ ನಿಧನರಾದರು.
ಕಾಞಂಗಾಡಿನ ಮಡಿಕೈ ಬಂಗಳಂ ನಿವಾಸಿಯಾದ ಅವರು ಅಸೌಖ್ಯ ಬಾಧಿಸಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕಾಸರಗೋಡು ಜಿಲ್ಲೆಯಿಂದ ಶಾಸಕರಾಗಿ ಆಯ್ಕೆಗೊಂಡ ಹಿಂದುಳಿದ ಪರಿಶಿಷ್ಟ ವರ್ಗದ ಪ್ರಭಾವಿ ನೇತಾರರಾಗಿದ್ದರು.
ನಾರಾಯಣನ್ ಅವರು 2001ರಿಂದ2011ರತನಕ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಪ್ರತಿನಿಧಿಸಿದ್ದರು. ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ಅವರು ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಎಡರಂಗದ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾಗಿದ್ದರು. 2014ರಿಂದ 2019ರ ತನಕ ಜಿಲ್ಲಾ ಪಂ. ಬೇಡಡ್ಕ ಡಿವಿಜನ್ ಸದಸ್ಯ, ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ, ಕಾಞಂಗಾಡು ಮಂಡಲ ಕಾರ್ಯದರ್ಶಿ, ಕೃಷಿ ಕಾರ್ಮಿಕ ಫೆಡರೇಷನ್ ಕೇರಳ ರಾಜ್ಯ ಕಾರ್ಯದರ್ಶಿ, ಆದಿವಾಸಿ ಮಹಾಸಭಾ ರಾಜ್ಯದ ಕಾರ್ಯದರ್ಶಿ, 'ಬಿಕ್ಕಿ'ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.





