ಕಾಸರಗೋಡು: ರಸ್ತೆ ಅಂಚಿಗೆ ಯಾವುದೇ ಸಭೆ ಸಮಾರಂಭ ನಡೆಸದಿರುವಂತೆ ನ್ಯಾಯಾಲಯದ ಆದೇಶದ ನಡುವೆಯೂ, ಪೊಲೀಸರ ಸಂರಕ್ಷಣೆಯೊಂದಿಗೆ ಕಾಸರಗೋಡು ನಗರದಲ್ಲಿ ನಡೆದ ಸಮಾರಂಭವೊಂದು ಭಾರೀ ಟ್ರಾಫಿಕ್ ಜಾಮ್‍ಗೆ ಕಾರಣವಾಯಿತು.
ನಗರದ ಎಂ.ಜಿ ರಸ್ತೆಯಲ್ಲಿ ವ್ಯಾಪಾರಿ ಮಳಿಗೆಯೊಂದರ ಉದ್ಘಾಟನಾ ಸಮಾರಂಭಕ್ಕಾಗಿ ರಸ್ತೆ ಅಂಚಿಗೆ ಚಪ್ಪರ ಅಳವಡಿಸಿದ ಪರಿಣಾಮ ಭಾರೀ ಜನಸಂದಣಿಯಿಂದ ಸಮಸ್ಯೆ ಎದುರಾಗಿತ್ತು. ಹಳೇ ಬಸ್ ನಿಲ್ದಾಣ, ಕರಂದಕ್ಕಾಡು, ನುಳ್ಳಿಪ್ಪಾಡಿ ವರೆಗೂ ವ್ಯಾಪಕ ಟ್ರಾಫಿಕ್ ಜಾಮ್‍ಗೆ ಕಾರಣವಾಗಿತ್ತು. ಈ ಮಧ್ಯೆ ತುರ್ತಾಗಿ ಧಾವಿಸುತ್ತಿದ್ದ ಆಂಬುಲೆನ್ಸ್ ಟ್ರಾಫಿಕ್ ಮಧ್ಯೆ ಸಿಲುಕಿಕೊಂಡು ಬಹಳ ಹೊತ್ತಿನ ವರೆಗೂ ರಸ್ತೆ ಮಧ್ಯೆ ನಿಲ್ಲಬೇಕಾಗಿ ಬಂದಿತ್ತು. ಬಹುತೇಕ ಮಂದಿ ವಾಹನಗಳನ್ನು ನಗರದೊಳಗೆ ಪ್ರವೇಶಿಸಲು ಸಾಧ್ಯವಾಗದೆ, ಹೊರವಲಯದಲ್ಲಿ ನಿಲ್ಲಿಸಿ, ನಡೆದು ತೆರಳಬೇಕಾದ ಅನಿವಾರ್ಯತೆ ಎದುರಾಯಿತು,
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿಯನ್ವಯ ಮೇಲ್ಸೇತುವೆ ಕೆಲಸ ಪೂರ್ತಿಗೊಂಡು ಘನ ವಾಹನಗಳು ಈ ಹಾದಿಯಾಗಿ ಸಂಚರಿಸುತ್ತಿದ್ದಂತೆ ಕರಂದಕ್ಕಾಡಿನಿಂದ ಹೊಸ ಬಸ್ ನಿಲ್ದಾಣ ಮೂಲಕ ನುಳ್ಳಿಪ್ಪಾಡಿ ವರೆಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿತ್ತು. ಶನಿವಾರ ಏಕಾಏಕಿ ವಾಹನ ದಟ್ಟಣೆಯಿಂದ ಬೆಳಗ್ಗಿನಿಂದಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಖಾಸಗಿ ಸಂಸ್ಥೆಯೊಂದರ ಉದ್ಘಾಟನಾ ಸಮಾರಂಭಕ್ಕೆ ಕಾರ್ಯಕ್ರಮ ಆಯೋಜಕರು ರಸ್ತೆಯನ್ನೇ ಬಳಸಿಕೊಂಡಿದ್ದರು. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗದಿರುವಂತೆ ಹಲವು ಮಂದಿ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಇದರ ನಡುವೆಯೂ ತಾಸುಗಳ ಕಾಲ ರಸ್ತೆತಡೆ ಉಂಟಾಗಿತ್ತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದರೂ, ಇದ್ಯಾವುದರ ಬಗ್ಗೆಯೂ ಪೊಲೀಸರು ತಲೆಕೆಸಿಸಿಕೊಂಡಿಲ್ಲ. ಒಂದೆಡೆ ಶಿಥಿಲಗೊಂಡ ರಸ್ತೆಗಳು, ಇನ್ನೊಂದೆಡೆ ಷಟ್ಪಥ ಕಾಮಗಾರಿ ನಡೆಯುತ್ತಿರುವ ಮಧ್ಯೆ, ರಸ್ತೆ ಅಂಚಿಗೆ ಇಂತಹ ಕಾರ್ಯಕ್ರಮ ನಡೆಸಲು ಪೊಲೀಸರು ಅನುಮತಿ ನೀಡಿರುವುದೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಮಾರಂಭ ನಡೆಯುವ ಸ್ಥಳದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ 30ರಷ್ಟು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ನಡುವೆಯೂ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗಿರುವ ಬಗ್ಗೆ ಪರಿಶೋಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ವಿ ವಿಜಯಭಾರತ್ ರೆಡ್ಡಿ ತಿಳಿಸಿದ್ದಾರೆ.





