ಮಂಜೇಶ್ವರ: ಮಂಜೇಶ್ವರ ಬ್ಲಾಕಿನ ವರ್ಕಾಡಿ ಗ್ರಾಮ ಪಂಚಾಯಿತಿಯಲ್ಲಿ ಕುಟುಂಬಶ್ರೀ ಸಾಲ ಪಡೆಯುವ ವಿಚಾರದಲ್ಲಿ ಸಿಡಿಎಸ್ ಚೇರ್‍ಪರ್ಸನ್ ಹಾಗೂ ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷರ ಮಧ್ಯೆ ಅವಾಚ್ಯ ಬೈಗಳು, ಕೊಲೆ ಬೆದರಿಕೆ ಸೇರಿದಂತೆ ವ್ಯಾಪಕ ವಾಗ್ವಾದದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆ ಪೊಲೀಸರು ಎರಡು ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿಯ ಸಿಡಿಎಸ್ ಕಚೇರಿಯಲ್ಲಿ ನಡೆದ ಸಭೆಯ ಮಧ್ಯೆ ಪ್ರಕರಣ ನಡೆದಿದೆ. ಸಿಡಿಎಸ್ ಚೇರ್‍ಪರ್ಸನ್ ವಿಜಯಲಕ್ಷ್ಮೀ ಅವರ ದೂರಿನ ಮೇರೆಗೆ ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷ ಪಾವೂರಿನ ರಾಜ್‍ಕುಮಾರ್ ಶೆಟ್ಟಿ, ರಕ್ಷಣ್ ಅಡಕ್ಕಳ, ಭಾಸ್ಕರ ಪೊಯ್ಯೆ, ಯತಿರಾಜ್, ಮಣಿಕಂಠ, ಉದಯ ಎಂಬವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ರಾಜ್‍ಕುಮಾರ್ ಶೆಟ್ಟಿ ಅವರ ಪ್ರತಿ ದೂರಿನ ಮೇರೆಗೆ ಸಿಡಿಎಸ್ ಚೇರ್‍ಪರ್ಸನ್ ವಿಜಯಲಕ್ಷ್ಮೀ, ಕಚೇರಿ ಅಕೌಂಟೆಂಟ್ ಉದಯ ಕುಮಾರ್, ಸಿಬ್ಬಂದಿ ಪ್ರಭಾವತೀ, ಸವಿತಾ, ನಿಕ್ಷಿತಾ ಎಂಬವರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




