ಮಂಜೇಶ್ವರ: ಅನುಭವಗಳ ಬುತ್ತಿಯಿಂದ ಹೊರಚೆಲ್ಲಿದ ಅನುಭಾವ 'ಧ್ವನಿ'ಯಲ್ಲಿ ಅಂತರಾಳದ ಭಾವನೆಯ ಪ್ರತಿಕ್ರಿಯೆಯಾಗಿ ಪ್ರಕಟಗೊಂಡಿದ್ದು, ಕೃತಿಯ ಶೀರ್ಷಿಕೆ ವಸ್ತುನಿಷ್ಠವಾಗಿ ಧ್ವನಿಸಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್.ಟಿ.ಮೀಯಪದವು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಶನಿವಾರ ಕಾಲೇಜಿನ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣೆ ಸಮಾರಂಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಪದವಿ ವಿದ್ಯಾರ್ಥಿನಿ ಕುಮಾರಿ. ದೀಕ್ಷಿತ ಮೀಯಪದವು ಅವರ ಸ್ವರಚಿತ ಲಘು ಬರಹಗಳ ಸಂಕಲನ 'ಧ್ವನಿ' ಕೃತಿಯನ್ನು ಬಿಡುಗಡೆಗೊಳಿಸಿದ ಬಳಿಕ ಕೃತಿ ಪರಿಚಯ ನೀಡಿ ಅವರು ಮಾತನಾಡಿದರು.
ಲೇಖನದ ವಸ್ತುವಿನ ಪ್ರಾಧಾನ್ಯತೆಗಿಂತಲೂ ಅದನ್ನು ಬಳಸಿದ ರೀತಿಯನ್ನು ಗಮನಿಸಿದರೆ ನವಿರಾದ ಹಾಸ್ಯದೊಂದಿಗೆ ನಾಜೂಕಾಗಿ ಜೀವನದ ನೋವು ನಲಿವುಗಳನ್ನೂ ಭವಿಷ್ಯದ ಬಯಕೆಗಳನ್ನೂ ತನ್ನ ಚೊಚ್ಚಲ ಬರಹಗಳಲ್ಲಿ ತೆರೆದಿಟ್ಟಿರುವುದು ಕಾಣಿಸಿಕೊಂಡಿದೆ. ಬದುಕಿನ ಈ ವರೆಗಿನ ಬದುಕಿನಲ್ಲಿ ಎದುರಾದ ಬಹು ವಿಚಾರಗಳನ್ನು ಮನದೊಳಗೆ ಮಥಿಸುತ್ತಾ ತನ್ನ ನಿರ್ಧಾರದ ವಲಯದೊಳಗೆ ಅದಕ್ಕೆ ಮರು ರೂಪವಿತ್ತುದನ್ನು ನೋಡಬಹುದು. ಶೈಲಿಯಲ್ಲಿ ಈ ಕೃತಿ ಭರವಸೆ ಮೂಡಿಸಿದೆ. ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಕೃತಿಗಳು ಮೂಡಿಬರಲಿ ಎಂದವರು ತಿಳಿಸಿದರು.
ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಎಳೆಯ ಹರೆಯದ ದೀಕ್ಷಿತರ ಈ ಕೃತಿ ಭರವಸೆ ಮೂಡಿಸಿದೆ. ಓದು ಅನುಭವಗಳು ಆಕೆಯನ್ನು ಪ್ರಬುದ್ಧತೆಯೆಡೆಗೆ ಕೊಂಡೊಯ್ದಿದೆ. ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಹಾರೈಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಧರ ಎನ್., ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಮೊಹಮ್ಮದಲಿ ಕೆ.ಪೆರ್ಲ,
ಕಾಲೇಜಿನ ಕಚೇರಿ ಅಧೀಕ್ಷಕ ದಿನೇಶ ಕೆ. ಶುಭಾಶಂಸನೆಗೈದರು. ಕೃತಿಯ ಲೇಖಕಿ ಕುಮಾರಿ ದೀಕ್ಷಿತ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಶಿವಶಂಕರ ಪಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಡಾ.ಸುಜೇಶ್ ಎಸ್. ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಜಯಂತಿ.ಕೆ. ನಿರೂಪಿಸಿದರು.





.jpg)
