ಪೆರ್ಲ: ಅಭಿವೃದ್ಧಿಯ ಪಥದೊಂದಿಗೆ ಸಾಗುತ್ತಿರುವ ಪೆರ್ಲ ಪೇಟೆಯಲ್ಲಿ ಸುಸಜ್ಜಿತ ಸೂರಿನೊಂದಿಗೆ ನಿರ್ಮಾಣಗೊಂಡಿರುವ ಆಟೋರಿಕ್ಷಾ ನಿಲ್ದಾಣ ಗಮನಸೆಳೆಯುತ್ತಿದೆ. ಎಣ್ಮಕಜೆ ಗ್ರಾಮ ಪಂಚಾಯಿತಿಯ ಶಿಫಾರಸಿನೊಂದಿಗೆ ಪೇಟೆಯಲ್ಲಿ ತಲೆಯೆತ್ತಿರುವ ಆಟೋರಿಕ್ಷಾ ತಂಗುದಾಣ ಹಾಗೂ ಪ್ರಯಾಣಿಕರ ತಂಗುದಾಣಗಳು ಪ್ರಾಯೋಜಕತ್ವದ ಸಂಸ್ಥೆಗಳ ಜಾಹೀರಾತಿನೊಂದಿಗೆ ಕಂಗೊಳಿಸುತ್ತಿದೆ.
ಈಗಾಗಲೇ ಕಾಸರಗೋಡು ಭಾಗಕ್ಕೆ ಸಂಚರಿಸುವ ಪ್ರಯಾಣಿಕರು ಆಶ್ರಯ ಪಡೆಯುತ್ತಿದ್ದ ಪ್ರಯಾಣಿಕರ ತಂಗುದಾಣ ಕಟ್ಟಡವನ್ನು ಅಭಿವೃದ್ಧಿಯ ನೆಪವೊಡ್ಡಿ ಕೆಡವಿ ಹಾಕಲಾಗಿತ್ತು. ನಂತರ ಇಲ್ಲಿ ಪ್ರಯಾಣಿಕರ ತಂಗುದಾಣ ಕಟ್ಟಡ ನಿರ್ಮಿಸದಿರುವುದರಿಂದ ಪ್ರಯಾಣಿಕರು ಬಿಸಿಲು-ಮಳೆಗೆ ಮೈಯೊಡ್ಡಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು.
ಸಂಸ್ಥೆಗಳ ಕೊಡುಗೆ:
ಪೇಟೆಯಲ್ಲಿ ಪುತ್ತೂರು ಭಾಗ ಹಾಗೂ ಪುತ್ತಿಗೆ-ಸೀತಾಂಗೋಳಿ ಮೂಲಕ ಕುಂಬಳೆಗೆ ಸಂಚರಿಸುವ ಬಸ್ಸಿಗಾಗಿ ಕಾದುನಿಲ್ಲುವ ಪ್ರಯಾಣಿಕರಿಗೆ ತಂಗುದಾಣದ ವ್ಯವಸ್ಥೆಯಿದ್ದರೂ. ಕಾಸರಗೋಡು ಭಾಗಕ್ಕೆ ತೆರಳುವ ಪ್ರಯಾಣಿಕರು ವ್ಯಾಪಾರಿ ಸಂಸ್ಥೆಗಳನ್ನು ಆಶ್ರಯಿಸಬೇಕಾಗಿತ್ತು. ಈ ಮಧ್ಯೆ ಗ್ರಾಮ ಪಂಚಾಯಿತಿ ಮಧ್ಯ ಪ್ರವೇಶದಿಂದ ಕೆಲವೊಂದು ಸಂಸ್ಥೆಗಳು ಕೊಡುಗೆಯಾಗಿ ಇಲ್ಲಿ ತಂಗುದಾಣ ಕಟ್ಟಡ ನಿರ್ಮಿಸಿಕೊಟ್ಟಿದೆ. ಪೇಟೆಯಲ್ಲಿ ನಿರ್ಮಾಣಗೊಂಡಿರುವ ತಾತ್ಕಾಲಿಕ ತಂಗುದಾಣದಿಂದ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲವಾಗಿದೆ. ಕಟ್ಟಡ ಕೊಡುಗೆಯಾಗಿ ನೀಡಿರುವವರಿಗೆ ತಮ್ಮ ಸಂಸ್ಥೆಯ ಜಾಹೀರಾತು ಪ್ರಕಟಣೆಗೂ ಅವಕಾಶವಾಗಿದೆ.
ಪೇಟೆಯಲ್ಲಿ ರಸ್ತೆ ಅಗಲಗೊಳಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಈ ಹಿಂದಿನ ಪ್ರಯಾಣಿಕರ ತಂಗುದಾಣ ಕಟ್ಟಡವನ್ನು ತೆರವುಗೊಳಿಸಲಾಗಿದ್ದು, ನಂತರ ಲೋಕೋಪಯೋಗಿ ಇಲಾಖೆಯ ವಿಶೇಷಾನುಮತಿಯೊಂದಿಗೆ ಪ್ರಾಯೊಜಕತ್ವದಲ್ಲಿ ಬಸ್ ತಂಗುದಾಣ ಹಾಗೂ ಆಟೋ ನಿಲ್ದಾಣಕ್ಕೆ ಸೂರು ನಿರ್ಮಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್ ತಿಳಿಸಿದ್ದಾರೆ.






