ಅನಂತನಾಗ್: ಇಲ್ಲಿನ ಸಾಲಿಯಾ ಪ್ರದೇಶದಲ್ಲಿರುವ ನೀರಿನ ಬುಗ್ಗೆ (ಒರತೆ)ಯೊಂದರ ದುರಸ್ತಿ ಕಾಮಗಾರಿ ಸಮಯದಲ್ಲಿ ಪುರಾತನ ಹಿಂದೂ ದೇವತೆಗಳ ಪ್ರತಿಮೆಗಳು ಪತ್ತೆಯಾಗಿವೆ.
ಶಿವಲಿಂಗ ಸೇರಿದಂತೆ ಇತರೆ ಹಿಂದೂ ದೇವತೆಗಳ ಪ್ರತಿಮೆಗಳು ಪತ್ತೆಯಾಗಿದ್ದು ಇವುಗಳನ್ನು ಶಿಲೆಗಳಿಂದ ಕೆತ್ತಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕ್ರಿ.ಶ. 625 ರಿಂದ 855ರವರೆಗೆ ಕಾಶ್ಮೀರವನ್ನು ಆಳ್ವಿಕೆ ಮಾಡಿದ್ದ ಕಾರ್ಕೋಟ ರಾಜರ ಕಾಲದ ಪ್ರತಿಮೆಗಳು ಎಂದು ಪುರಾತತ್ತ್ವ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಸಿಕ್ಕಿರುವ ಎಲ್ಲಾ ಪ್ರತಿಮೆಗಳನ್ನು ಶ್ರೀನಗರದಲ್ಲಿರುವ ಪುರಾತತ್ತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು. ಇದರಿಂದ ವಿದ್ಯಾರ್ಥಿಗಳು ಹಾಗೂ ಅಧ್ಯಯನಕಾರರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ದೇವಸ್ಥಾನವಿರುವ ಸಾಧ್ಯತೆ ಇದೆ ಅಥವಾ ಪ್ರತಿಮೆಗಳನ್ನು ರಕ್ಷಿಸುವ ಉದ್ದೇಶದಿಂದ ಒರತೆಯಲ್ಲಿ ಇಟ್ಟಿರಬಹುದು ಎಂದು ಕಾಶ್ಮೀರದ ಪಂಡಿತರೊಬ್ಬರು ತಿಳಿಸಿದ್ದಾರೆ.




