ಬಲ್ಲಿಯಾ: 'ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೆಸರನ್ನು ಹೇಳುವಂತೆ ತನಿಖಾಧಿಕಾರಿಗಳು ನನಗೆ ಚಿತ್ರಹಿಂಸೆ ನೀಡಿದ್ದರು' ಎಂದು ಪ್ರಕರಣದಲ್ಲಿ ಖುಲಾಸೆಗೊಂಡಿರುವ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್, ಭಾಗವತ್ ಸೇರಿದಂತೆ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಹೆಸರನ್ನು ಹೇಳುವಂತೆ ಪದೇ ಪದೇ ಚಿತ್ರಹಿಂಸೆ ನೀಡಿದ್ದರು' ಎಂದು ಉಪಾಧ್ಯಾಯ ತಿಳಿಸಿದ್ದಾರೆ.
'ಮೊದಲ ದಿನದಿಂದಲೇ ನಾನು ನಿರಪರಾಧಿ ಎಂಬುದು ನನಗೆ ತಿಳಿದಿತ್ತು. ನಾನು ಮೂರು ಬಾರಿ ಮಂಪರು ಪರೀಕ್ಷೆ ಮತ್ತು ಸುಳ್ಳು ಪತ್ತೆ ಪರೀಕ್ಷೆಗೆ ಸ್ವಯಂಪ್ರೇರಿತನಾಗಿ ಒಳಗಾಗಿದ್ದೆ. ಆದರೆ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಎಂದಿಗೂ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿಲ್ಲ' ಎಂದು ಉಪಾಧ್ಯಾಯ ಹೇಳಿದ್ದಾರೆ.
'ನನ್ನನ್ನು ಹಲವು ವರ್ಷಗಳ ಕಾಲ ಏಕಾಂಗಿಯಾಗಿ ಬಂಧನದಲ್ಲಿರಿಸಲಾಗಿತ್ತು. ಜೈಲು ಸೇರಿದ ಕ್ಷಣದಿಂದ ಪೊಲೀಸರಿಂದ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಎದುರಿಸಬೇಕಾಯಿತು. ನನ್ನನ್ನು ಬಿಡುಗಡೆ ಮಾಡುವ ಬದಲಾಗಿ ರಾಜಕೀಯ ಮತ್ತು ಆಧ್ಯಾತ್ಮಿಕ ಗುರುಗಳ ಹೆಸರನ್ನು ಹೆಸರಿಸುವಂತೆ ಪೊಲೀಸರು ನನ್ನ ಮೇಲೆ ಒತ್ತಡ ಹೇರಿದ್ದರು' ಎಂದು ಉಪಾಧ್ಯಾಯ ಆರೋಪಿಸಿದ್ದಾರೆ.
'ನಾನು ಮಾಲೆಗಾಂವ್‌ಗೆ ಎಂದಿಗೂ ಭೇಟಿ ನೀಡಿರಲಿಲ್ಲ. ಬಾಂಬ್ ಸ್ಫೋಟ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.
'ಪ್ರಕರಣದ ತನಿಖೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿತ್ತು. ಆಗಿನ ಯುಪಿಎ ಸರ್ಕಾರದಿಂದ ಪ್ರಭಾವಿತವಾಗಿತ್ತು. ಪೊಲೀಸ್ ಅಧಿಕಾರಿಗಳು ಸೋನಿಯಾ ಗಾಂಧಿ, ದಿಗ್ವಿಜಯ ಸಿಂಗ್ ಮತ್ತು ಸುಶೀಲ್ ಕುಮಾರ್ ಶಿಂಧೆಯಂತಹ ನಾಯಕರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು' ಎಂದು ಅವರು ದೂರಿದ್ದಾರೆ.
'ನನ್ನ ಮೇಲೆ 25 ಆರೋಪಗಳನ್ನು ಹೊರಿಸಲಾಗಿತ್ತು. ನ್ಯಾಯಾಲಯದಲ್ಲಿ ಎಲ್ಲವೂ ಸುಳ್ಳು ಎಂದು ಸಾಬೀತಾಗಿದೆ. 17 ವರ್ಷಗಳ ನಂತರ ಕೊನೆಗೂ ನ್ಯಾಯ ದೊರಕಿದೆ' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಮ್ ನಗರ ಗ್ರಾಮದ ರಮೇಶ್ ಉಪಾಧ್ಯಾಯ ಅವರನ್ನು 2008ರ ಅಕ್ಟೋಬರ್ 28ರಂದು ಬಂಧಿಸಲಾಗಿತ್ತು. ಈಚೆಗೆ ಎನ್‌ಐಎನ ವಿಶೇಷ ನ್ಯಾಯಾಲಯ ಪ್ರಕರಣದ ಎಲ್ಲಾ ಆರೋಪಿಗಳನ್ನೂ ಖುಲಾಸೆಗೊಳಿಸಿ ತೀರ್ಪು ನೀಡಿತ್ತು




