ಗೊಂಡಾ: ಎಸ್‌ಯುವಿ ಕಾರೊಂದು ಇಲ್ಲಿನ ಸರಯೂ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 11 ಜನರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಕಾರಿನಲ್ಲಿ ಚಾಲಕ ಸೇರಿ 15 ಮಂದಿ ಇದ್ದರು. ಸಿಹಗಾಂವ್ ಗ್ರಾಮದಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಬೆಲ್ವಾ ಬಹುತಾ ಬಳಿ ಅಪಘಾತ ಸಂಭವಿಸಿದೆ' ಎಂದು ಇಟಿಯಾಥೋಕ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕೃಷ್ಣ ಗೋಪಾಲ್ ರೈ ತಿಳಿಸಿದ್ದಾರೆ.
ಗ್ರಾಮಸ್ಥರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ, ಮುಳುಗಿದ್ದ ವಾಹನದಿಂದ 11 ಶವಗಳನ್ನು ಹೊರತೆಗೆಯಲಾಗಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.




