ಇವತ್ತು ಸ್ವಾತಂತ್ರ್ಯ ದಿನೋತ್ಸವ (Indian independence day). ಭಾರತಕ್ಕೆ ಸ್ವಾತಂತ್ರ್ಯ ಬರದೆ ಬ್ರಿಟಿಷರ ಆಳ್ವಿಕೆಯೇ ಇದ್ದಿದ್ದರೆ ಬಹಳ ಚೆನ್ನಾಗಿತ್ತು ಎಂದು ಹೇಳುವವರು ಈಗಲೂ ಬಹಳ ಮಂದಿ ಇದ್ದಾರೆ. ಸ್ವಾತಂತ್ರ್ಯಾನಂತರ ಬಂದ ಸರ್ಕಾರಗಳ ನಿರ್ಲಕ್ಷ್ಯತನದಿಂದ ಭಾರತದ ಅಭಿವೃದ್ಧಿಪಥ ಮಂದವಾಗಿ ಸಾಗಿದ್ದು ನಿಜ.
ಭಾರತದಲ್ಲಿ ಯಾಕೆ ಜಾಗತಿಕ ಮಟ್ಟದ ಉದ್ಯಮಗಳು ತಯಾರಾಗಲಿಲ್ಲ? ವಿಶ್ವದ ಮೇಲೆ ಪ್ರಭಾವ ಬೀರಬಲ್ಲ ಉದ್ಯಮಿಗಳು ಯಾಕೆ ನಿರ್ಮಾಣವಾಗಲಿಲ್ಲ ಎಂದು ಈಗ ಬಹಳ ಜನರು ಕೇಳುತ್ತಾರೆ. ಆದರೆ, ಬ್ರಿಟಿಷರು ಬರುವ ಮುನ್ನ ಭಾರತದಲ್ಲಿ ಅದ್ಭುತವಾದ ಉದ್ಯಮಿಗಳಿದ್ದರು, ಉದ್ದಿಮೆಗಳಿದ್ದುವು ಎಂದರೆ ಬಹಳ ಮಂದಿಗೆ ಆಶ್ಚರ್ಯ ಆಗುತ್ತದೆ. ಇತಿಹಾಸಕಾರ ಸೌರಭ್ ಮುಖರ್ಜಿಯಾ ಅವರ ಪ್ರಕಾರ, ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದಲ್ಲಿ ಬ್ಯುಸಿನೆಸ್ ಪ್ರತಿಭೆಗಳನ್ನು ಹಂತ ಹಂತವಾಗಿ ನಾಶ ಮಾಡುತ್ತಾ ಬರಲಾಗಿತ್ತಂತೆ.
ಒಡೆದು ಆಳುವ ನೀತಿ ಜಾರಿ ತಂದಿದ್ದ ಬ್ರಿಟಿಷರು…
ಬ್ರಿಟಿಷರು ಭಾರತದಂತಹ ಬೃಹತ್ ದೇಶವನ್ನು ಆಳಲು ಕಂಡುಕೊಂಡ ಸುಲಭ ಮಾರ್ಗ ಎಂದರೆ ಅದು ಒಡೆದು ಆಳುವ ನೀತಿ. ಭಾರತದ ಅದಮ್ಯ ಶಕ್ತಿಯನ್ನು ಆಂತರಿಕವಾಗಿ ವ್ಯವಸ್ಥಿತವಾಗಿ ಕುಂದಿಸುತ್ತಾ ಹೋದರು. ಇಂಗ್ಲೀಷನ್ನು ಇಟ್ಟುಕೊಂಡು ಜನರಲ್ಲಿ ಕೀಳರಿಮೆ ತಂದು ಗುಲಾಮಗಿರಿ ಇಂಗ್ಲೀಷ್ ಕ್ಲರ್ಕ್ಗಳನ್ನು ಸೃಷ್ಟಿಸಿದರು. ತಾವು ಈ ನಾಡಿಗೆ ಕಾಲಿಡುವ ಮುನ್ನ ಭಾರತ ಹಾವಾಡಿಗರ ದೇಶ, ನಿರಕ್ಷರಕುಕ್ಷಿಗಳ ನಾಡು ಇತ್ಯಾದಿ ಅಪಖ್ಯಾತಿ ಹೊಂದಿತ್ತು ಎಂಬಂತೆ ಬ್ರಿಟಿಷರು ಬಿಂಬಿಸಿದ್ದರು. ಭಾರತೀಯರಿಗೆ ಆಡಳಿತ ಆಗದು, ನೌಕರರಾಗಲು ಲಾಯಕ್ಕು ಎಂದು ಬ್ರೇನ್ವಾಶ್ ಮಾಡಿದ್ದರು. ಇಂಗ್ಲೀಷ್ ಭಾಷೆಯನ್ನು ಇಟ್ಟುಕೊಂಡು ಭಾರತೀಯರಲ್ಲಿ ಕೀಳರಿಮೆ ಮೂಡಿಸಿದ್ದರು. ಇಂಗ್ಲೀಷ್ ಮಾತನಾಡುವ ಕ್ಲರ್ಕ್ಗಳನ್ನು ಸೃಷ್ಟಿಸಿದ್ದರು. ಇಡೀ ಶಿಕ್ಷಣ ವ್ಯವಸ್ಥೆಯೇ ಇಂಥ ಗುಲಾಮೀ ಕ್ಲರ್ಕ್ಗಳ ಸೃಷ್ಟಿಯ ಕಾರ್ಖಾನೆಯಂತಾಗಿತ್ತು. ಆದರೆ, ಬ್ರಿಟಿಷರು ಬರುವ ಮುನ್ನ ಭಾರತ ನಿಜವಾಗಿಯೂ ಹೇಗಿತ್ತು ಎಂಬ ಪ್ರಶ್ನೆಗೆ ಕೆಲ ಇತಿಹಾಸಕಾರರು ಉತ್ತರ ಕೊಟ್ಟಿದ್ದಾರೆ.
ವೀರ್ಜಿ ವೋರಾ, ಶಾಂತಿ ದಾಸ್ ಝಾವಿರಿ, ಜಗತ್ ಶೇಠ್, ಮುಲ್ಲಾ ಅಬ್ದುಲ್ ಗಫಾರ್ ಮೊದಲಾದ ದೊಡ್ಡ ಉದ್ಯಮಿಗಳು 16ರಿಂದ 18ನೇ ಶತಮಾನದಲ್ಲಿ ಇದ್ದರು. ಹಡಗು, ಹತ್ತಿ, ಹಣಕಾಸು, ವ್ಯಾಪಾರ ಇತ್ಯಾದಿ ಕ್ಷೇತ್ರದಲ್ಲಿ ಭಾರತೀಯರು ಪಾರಮ್ಯ ಸಾಧಿಸಿದ್ದರು. ಆ ಕಾಲಘಟ್ಟದಲ್ಲಿ ಭಾರತದಲ್ಲಿ ಹಲವಾರು ಯೂನಿಕಾರ್ನ್ ಬ್ಯುಸಿನೆಸ್ ಸಂಸ್ಥೆಗಳಿದ್ದುವಂತೆ.
ವರ್ತಕರ ಬಗ್ಗೆ ಅಪಾರ್ಥ ಮೂಡಿಸಿದ್ದ ಬ್ರಿಟಿಷರು
ಭಾರತೀಯ ಉದ್ಯಮಿಗಳ ಸಾಮರ್ಥ್ಯ ಕಂಡು ದಂಗಾಗಿದ್ದ ಬ್ರಿಟಿಷರು, ಕ್ರಮೇಣವಾಗಿ ಈ ಬ್ಯುಸಿನೆಸ್ಮ್ಯಾನ್ಗಳನ್ನು ಕಡೆಗಣಿಸುತ್ತಾ ಬಂದರು. ಬಾಂಬೆಯ ಪಾರ್ಸಿ ವರ್ತಕರನ್ನು ಟಾರ್ಗೆಟ್ ಮಾಡಿ ಮುಗಿಸಿದರು. ಪಾರ್ಸಿಗಳಲ್ಲದೇ ಗುಜರಾತಿ, ಮಾರ್ವಾಡಿ, ಸಿಂಧಿ ಬ್ಯುಸಿನೆಸ್ಮ್ಯಾನ್ಗಳು ಬಹಳ ಮೋಸಗಾರರು ಎಂದು ಬಿಂಬಿಸಿ ಸಮಾಜದಲ್ಲಿ ಅವರ ಸ್ಥಾನಮಾನ ಕುಂದುವಂತೆ ಮಾಡಿದರು ಬ್ರಿಟಿಷರು ಎಂದು ಹೇಳುತ್ತಾರೆ ಸೌರಭ್ ಮುಖರ್ಜಿ.
ಭಾರತೀಯ ವರ್ತಕರು ನಾಲಾಯಕ್ಕು. ವಿದೇಶಿಗರು ಶ್ರೇಷ್ಠರು ಎನ್ನುವ ಮಾನಸಿಕತೆ ಬ್ರಿಟಿಷರ ಅವಧಿಯಲ್ಲಿ ಸೃಷ್ಟಿಯಾಗದ್ದು, ಸ್ವಾತಂತ್ರ್ಯಾನಂತರವೂ ಮುಂದುವರಿದಿದೆ. ಭಾರತದ ಔದ್ಯಮಿಕ ಶಕ್ತಿ ಹೆಚ್ಚು ಜಾಗೃತಗೊಂಡಿದ್ದು 1991ರ ನಂತರವೇ ಎಂಬುದು ಅವರ ವಾದ.
ಮೊಘಲರ ಮುಂಚಿನ ದಿನಗಳು ಇನ್ನೂ ಉತ್ತಮವಿದ್ದುವು…
ಭಾರತದ ಇತಿಹಾಸವನ್ನು ಇವತ್ತು ಮೂರೇ ಭಾಗದಲ್ಲಿ ಹೇಳುತ್ತಾರೆ. ಬ್ರಿಟಿಷರ ಅವಧಿ, ಮೊಘಲರ ಅವಧಿ ಮತ್ತು ಆರಂಭಿಕ ಅವಧಿ. ಇತಿಹಾಸ ಪುಸ್ತಕಗಳಲ್ಲಿ ಬ್ರಿಟಿಷರು ಮತ್ತು ಮೊಘಲರ ಆಡಳಿತದ ಬಗ್ಗೆಯೇ ಹೆಚ್ಚಿನ ವಿವರಣೆ ಇರುತ್ತದೆ. ಅಶೋಕ, ಸಮುದ್ರಗುಪ್ತ, ಹರ್ಷವರ್ಧನ ಇತ್ಯಾದಿ ರಾಜರು, ಹಾಗೂ ಗುಪ್ತರು, ಶಾತವಾಹನರು, ಮಗಧರು, ಚೋಳರು ಇತ್ಯಾದಿ ರಾಜವಂಶಗಳ ಉಲ್ಲೇಖಗಳು ಮತ್ತು ಸಣ್ಣ ವಿವರಣೆಗಳು ಮಾತ್ರ ಸಿಗುತ್ತವೆ.
ಮೊಘಲರ ಕಾಲದಲ್ಲಿ ಭಾರತವು ಜಾಗತಿಕವಾಗಿ ಪ್ರಮುಖ ಆರ್ಥಿಕತೆ ಎನಿಸಿತ್ತು ಎನ್ನಲಾಗುತ್ತದೆ. ಅದಕ್ಕಿಂತ ಮುಂಚೆಯೂ ಭಾರತವು ವಿಶ್ವಶ್ರೇಷ್ಠ ವ್ಯಾಪಾರಿಗಳ ನಾಡಾಗಿತ್ತು. ಭಾರತದ ನೌಕಾ ಕ್ಷೇತ್ರ ಅಮೋಘವಾಗಿತ್ತು. ಭಾರತದ ರಾಜ ಸಾಮ್ರಾಜ್ಯಗಳು ಹಲವು ದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದವು. ಸಮುದ್ರ ಮಾರ್ಗದಲ್ಲಿ ಸರಕುಗಳ ಸಾಗಣೆ ಮಾಡಲಾಗುತ್ತಿತ್ತು.
ಬಹಳ ಶ್ರೇಷ್ಠ ಇತಿಹಾಸ ಇರುವ ಭಾರತದ ಬಗ್ಗೆ ಕೀಳರಿಮೆ ಮೂಡಿಸುವ ಪಠ್ಯವನ್ನು ಓದಿ ಬೆಳೆದಿರುವ ಜನರಲ್ಲಿ ಈಗಲೂ ವಿದೇಶೀ ಕಂಪನಿಗಳೇ ಶ್ರೇಷ್ಠ ಎನ್ನುವ ಭಾವನೆ ಸಹಜವಾಗಿ ನೆಲಸಿರುತ್ತದೆ. ಭಾರತೀಯರು ಉದ್ಯಮ ಮತ್ತು ತಂತ್ರಜ್ಞಾನದಲ್ಲಿ ಪರಿಣಿತಿ ಹೊಂದಬಲ್ಲರು ಎಂಬುದಕ್ಕೆ ಸಾಕ್ಷಿ ಇತ್ತು ಜಾಗತಿಕ ದೈತ್ಯ ಕಂಪನಿಗಳ ಸಿಇಒಗಳ ಸ್ಥಾನದಲ್ಲಿ ಭಾರತೀಯರು ಇರುವುದು. ಭಾರತದಲ್ಲಿ ಉದ್ಯಮಗಳ ಬೆಳವಣಿಗೆಗೆ ಇನ್ನೂ ಪೂರಕವಾದ ಪರಿಸರ ಮೂಡಿದಲ್ಲಿ ಇಲ್ಲೂ ಕೂಡ ವಿಶ್ವಶ್ರೇಷ್ಠ ಕಂಪನಿಗಳು ಹುಟ್ಟಬಲ್ಲುವು.




