ಕಾಸರಗೋಡು: ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಎನ್‍ಸಿಪಿಎಸ್ ಮಹತ್ವದ ಪಾತ್ರ ವಹಿಸಲಿರುವುದಾಗಿ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಖಾತೆ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.
ಅವರು ಕಾಞಂಗಾಡಿನ ಪಿಡಬ್ಲ್ಯೂಡಿ ವಿಶ್ರಾಂತಿ ಗೃಹದಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಜಿಲ್ಲಾ ಎನ್.ಎಸ್.ಪಿ(ಎಸ್)ನಾಯಕತ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರದಿಂದ ತಿರುವನಂತಪುರದ ಪಾರಶಾಲೆ ವರೆಗಿನ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಧಿಸುವ ನಿಟ್ಟಿನಲ್ಲಿ ಪಕ್ಷವು ಅಗತ್ಯ ಸಂಘಟನಾ ವ್ಯವಸ್ಥೆಗಳನ್ನು ಸಿದ್ಧಪಡಿಸುತ್ತಿದೆ. ಎಡರಂಗದ ಮಿತ್ರಪಕ್ಷವಾಗಿ ಎನ್‍ಸಿಪಿ ಮುಂದುವರಿಯಲಿದೆ ಎಂದು ತಿಳಿಸಿದರು.
ಎನ್‍ಸಿಪಿಎಸ್ ಜಿಲ್ಲಾಧ್ಯಕ್ಷ ಕರೀಮ್ ಚಂದೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ಸಿ. ಬಾಲನ್, ಜಿಲ್ಲಾ ಉಪಾಧ್ಯಕ್ಷ ರಾಜು ಕೊಯ್ಯೋನ್, ಕೋಶಾಧಿಕಾರಿ ಬೆನ್ನಿ ನಾಗಮಟ್ಟಂ, ಪ್ರಧಾನ ಕಾರ್ಯದರ್ಶಿಗಳಾದ ಟಿ.ನಾರಾಯಣನ್ ಮಾಸ್ಟರ್, ಉದಿನೂರು ಸುಕುಮಾರನ್, ಓ.ಕೆ.ಬಾಲಕೃಷ್ಣನ್, ಸುಬೈರ್ ಪಡ್ಪು, ಎ.ಟಿ.ವಿಜಯನ್, ಸಿದ್ದಿಕ್ ಕೈಕಂಬ, ದಾಮೋದರ ಬೆಳ್ಳಿಗೆ, ಸೀನತ್ ಸತೀಶನ್, ಬ್ಲಾಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.





