ಕೊಚ್ಚಿ: ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ವೇಳೆ ಇಲ್ಲಿನ ಏಲೂರ್ ಗ್ರಾಮದ ಸಿಪಿಐ (ಎಂ) ಬ್ರಾಂಚ್ ಸಮಿತಿ ರಾಷ್ಟ್ರ ಧ್ವಜಕ್ಕೆ ಬದಲಾಗಿ ಕಾಂಗ್ರೆಸ್‌ನ ಧ್ವಜ ಹಾರಿಸಿದ ವಿಚಿತ್ರ ಘಟನೆ ನಡೆದಿದೆ.
ಪಕ್ಷದ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಯಾಗಿರುವ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದ ಬಲದಾಗಿ ಕಾಂಗ್ರೆಸ್ ಧ್ವಜವನ್ನು ತಪ್ಪಾಗಿ ಗ್ರಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಧ್ವಜಾರೋಹಣ ನಡೆಸಿದ ಬಳಿಕವೇ ಪ್ರಮಾದ ಗೊತ್ತಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
'10 ನಿಮಿಷ ಕಾಂಗ್ರೆಸ್ ಧ್ವಜ ಹಾರಿದೆ. ಗೊತ್ತಾದ ಕೂಡಲೇ ಅದನ್ನು ಇಳಿಸಲಾಗಿದೆ. ಅದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಅದರ ಚಿತ್ರ, ವಿಡಿಯೊ ಹರಿದಾಡಿದೆ.
ಘಟನೆಯ ಬಗ್ಗೆ ಸಿಪಿಐಎಂ ಜಿಲ್ಲಾ ನಾಯಕರೊಬ್ಬರು ಪರಿಶೀಲನೆ ನಡೆಸಿದ್ದು, ತಪ್ಪಾಗಿದ್ದು ಒಪ್ಪಿಕೊಂಡಿದ್ದಾರೆ.
'ತನ್ನ ಬಳಿ ಹಲವು ಪಕ್ಷಗಳ ಧ್ವಜ ಇದ್ದು, ಸ್ವಾತಂತ್ಯೋತ್ಸವದ ದಿನ ಕಾಂಗ್ರೆಸ್ ಬಾವುಟವನ್ನು ರಾಷ್ಟ್ರಧ್ವಜವೆಂದು ತಪ್ಪಾಗಿ ಗ್ರಹಿಸಿದ್ದಾಗಿ ವ್ಯಕ್ತಿ ಹೇಳಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಪಕ್ಷ ತೀರ್ಮಾನಿಸಿದೆ' ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
( ಈ ಸುದ್ದಿಯಲ್ಲಿ ಬಳಸಿರುವ ಚಿತ್ರವು ಎಐ ಸೃಷ್ಟಿಸಿದ ಕಾಲ್ಪನಿಕ ಚಿತ್ರವಾಗಿದ್ದು, ನೈಜ ಘಟನೆಯನ್ನು ಆಧರಿಸಿದ್ದಲ್ಲ)

