ಕತಿಹಾರ್: ಪ್ರಧಾನಿ ನರೇಂದ್ರ ಮೋದಿ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಬಂಧ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿಕ್ರಿಯಿಸಿದ್ದು, ಸತ್ಯವನ್ನು ಹೇಳಲು ಹೆದರುವುದಿಲ್ಲ ಎಂದು ಶನಿವಾರ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೋದಿ ವಿರುದ್ಧ ಪೋಸ್ಟ್ ಹಂಚಿಕೊಂಡಿದ್ದ ಯಾದವ್, ಮೋದಿ ಜನರಿಗೆ ನೀಡಿದ ಭರವಸೆಗಳು ಕೇವಲ 'ಜುಮ್ಲಾ' ( ಸುಳ್ಳು ಭರವಸೆ), ವಾಕ್ಚಾತುರ್ಯವಷ್ಟೇ ಎಂದು ಆರೋಪಿಸಿದ್ದರು. ಈ ಸಂಬಂಧ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್‌ಗೆ ಯಾರು ಹೆದರುತ್ತಾರೆ?, ಜುಮ್ಲಾ ಆಕ್ಷೇಪಾರ್ಹ ಪದವೇ?, ನಾನು ಸತ್ಯವನ್ನು ಹೇಳಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ. ಅವರು ನನ್ನ ವಿರುದ್ಧ ಎಷ್ಟು ಪ್ರಕರಣಗಳನ್ನಾದರೂ ದಾಖಲಿಸಬಹುದು ಎಂದು ಯಾದವ್ ತಿಳಿಸಿದ್ದಾರೆ.
ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಅಸ್ಸಾಂನಂತಹ ದೂರದ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಿಸುವುದರಲ್ಲಿ ಅರ್ಥವೇನು?, ಬಿಹಾರದಲ್ಲೂ ಬಿಜೆಪಿ ಅಧಿಕಾರದಲ್ಲಿದೆ. ಅವರಿಗೆ ಧೈರ್ಯವಿದ್ದರೆ, ಇಲ್ಲಿ ಎಫ್‌ಐಆರ್ ದಾಖಲಿಸಲಿ. ದೇಶದಾದ್ಯಂತ ಎಲ್ಲಾ ಬಿಜೆಪಿ ಶಾಸಕರು ನಮ್ಮ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಿ ಎಂದು ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಸವಾಲು ಹಾಕಿದ್ದಾರೆ.
'ಮತದಾರರ ಅಧಿಕಾರ ಯಾತ್ರೆ'ಯು ಬಿಹಾರದ ಸಸಾರಾಮ್ನಿಂದ ಆರಂಭಗೊಂಡಿದ್ದು, ಈ ಯಾತ್ರೆಯು ಬಿಹಾರದಾದ್ಯಂತ 16 ದಿನಗಳು ನಡೆಯಲಿದೆ. 1,300 ಕಿ.ಮೀ ಸಾಗಲಿರುವ ಈ ಯಾತ್ರೆಯು ಸೆಪ್ಟೆಂಬರ್ 1ರಂದು ಪಟ್ನಾದಲ್ಲಿ ಸಮಾರೋಪಗೊಳ್ಳಲಿದೆ.




