ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದಾದ್ಯಂತ 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಬುಧವಾರ ಚಾಲನೆ ದೊರೆಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ರಾಷ್ಟ್ರಧ್ವಜ ಹಾರಿಸಿ, ನಾಗರಿಕರೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
'ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ಇದು ಎಲ್ಲಾ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ನನ್ನ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ್ದೇನೆ. ಈ ಉಪಕ್ರಮವು ದೇಶಭಕ್ತಿಯ ಚೈತನ್ಯವನ್ನು ಬಲಪಡಿಸುವ ಜನಾಂದೋಲನವಾಗಿ ಮಾರ್ಪಟ್ಟಿದೆ' ಎಂದು ಶಾ ಹೇಳಿದ್ದಾರೆ.
'ಈ ಅಭಿಯಾನವು ದೇಶದ 140 ಕೋಟಿ ನಾಗರಿಕರು ತಮ್ಮ ತ್ಯಾಗ, ತಪಸ್ಸು ಮತ್ತು ಸಮರ್ಪಣೆಯ ಮೂಲಕ ಅಸಂಖ್ಯಾತ ಹೋರಾಟಗಾರರು ಸಾಧಿಸಿದ ಸ್ವಾತಂತ್ರ್ಯ ಭಾರತವನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತಮಗೊಳಿಸಲು ದೃಢನಿಶ್ಚಯವನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ' ಎಂದು ಅವರು ತಿಳಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರೊಂದಿಗೆ 'ಹರ್ ಘರ್ ತಿರಂಗಾ' ಅಭಿಯಾನದ ಭಾಗವಾಗಿ 'ತಿರಂಗ ಯಾತ್ರೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಈ ಅಭಿಯಾನವು 'ಆಜಾದಿ ಕಾ ಅಮೃತ್ ಮಹೋತ್ಸವ (ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ) ಭಾಗವಾಗಿ ಪ್ರಾರಂಭವಾದ ಅಭಿಯಾನವಾಗಿದೆ. ಈ ಅಭಿಯಾನದ ಮೂಲಕ ಭಾರತದ ಸ್ವಾತಂತ್ರ್ಯವನ್ನು ಸಂಭ್ರಮಿಸಲು ಮತ್ತು ಆ ದಿನವನ್ನು ವಿಶಿಷ್ಟವಾಗಿ ಗುರುತಿಸುವ ಸಲುವಾಗಿ ಜನರು ತ್ರಿವರ್ಣ ಧ್ವಜವನ್ನು ಮನೆಗಳ ಮೇಲೆ ಹಾರಿಸುವುದಾಗಿದೆ.




