HEALTH TIPS

Malegaon Blast: ಭಾಗವತ್ ಸೆರೆಗೆ ATS ಬಯಸಿತ್ತು ಎಂಬ ವಾದ ತಿರಸ್ಕರಿಸಿದ ಕೋರ್ಟ್

ಮುಂಬೈ: ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) 2008ರ ಮಾಲೆಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಬಂಧಿಸಲು ಬಯಸಿತ್ತು ಎಂಬ ವಾದವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಮಾಲೆಗಾಂವ್‌ ಸ್ಫೋಟ ಪ್ರಕರಣದ ತನಿಖೆ ಆರಂಭಿಸಿದ್ದ ಎಟಿಎಸ್‌, ಆರೋಪ ಪಟ್ಟಿಯನ್ನೂ ಪ್ರಕಟಿಸಿತ್ತು. ಅದಾದನಂತರ, ಎನ್‌ಐಎ ಈ ಪ್ರಕರಣವನ್ನು 2010ರಲ್ಲಿ ಕೈಗೆತ್ತಿಕೊಂಡಿತ್ತು.

2008ರ ಸೆಪ್ಟೆಂಬರ್‌ 29ರಂದು (ನವರಾತ್ರಿಯ ಮುನ್ನಾದಿನ ಹಾಗೂ ಪವಿತ್ರ ರಂಜಾನ್‌ ಮಾಸದ ಈದ್‌ ಆಚರಣೆಗೆ ಕೆಲವೇ ದಿನಗಳಿದ್ದಾಗ) ಅಂಜುಮಾನ್‌ ಚೌಕ್‌ ಮತ್ತು ಭಿಕ್ಕು ಚೌಕ್‌ ನಡುವೆ ಸ್ಫೋಟ ಸಂಭವಿಸಿತ್ತು. ಈ ವೇಳೆ 6 ಮಂದಿ ಮೃತಪಟ್ಟು 101 ಜನರು ಗಾಯಗೊಂಡಿದ್ದರು.

ಎಟಿಎಸ್‌ ತನಿಖಾ ತಂಡದಲ್ಲಿದ್ದ ಮೆಹಬೂಬ್‌ ಮುಜಾವರ್‌ ಅವರು, ಭಾಗವತ್‌ ಅವರನ್ನು ಬಂಧಿಸುವಂತೆ ಮೇಲಧಿಕಾರಿಗಳಿಂದ ಆದೇಶವಿತ್ತು ಎಂದು ಇತ್ತೀಚೆಗೆ ಹೇಳಿದ್ದರು. ಆದರೆ, ಭಾಗವತ್‌ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿ ನೇಮಕಗೊಂಡದ್ದು 2009ರ ಮಾರ್ಚ್‌ 21ರಂದು. ಈ ಅಂಶಗಳನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿರಬಹುದು.

ಪ್ರಕರಣದ ಆರೋಪಿಗಳಾಗಿದ್ದ ಏಳು ಮಂದಿಯನ್ನು ಖುಲಾಸೆಗೊಳಿಸಿದ 1,036 ಪುಟಗಳ ಆದೇಶವನ್ನು ವಿಶೇಷ ನ್ಯಾಯಾಧೀಶ ಅಭಯ್‌ ಲಹೋತಿ ಪ್ರಕಟಿಸಿದ್ದರು.

'ಆರೋಪಿಗಳ ವಿರುದ್ಧ ನಂಬಲರ್ಹ ಹಾಗೂ ಬಲವಾದ ಸಾಕ್ಷ್ಯಗಳು ಇಲ್ಲ' ಎಂದಿರುವ ನ್ಯಾಯಾಲಯ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌, ಲೆಫ್ಟಿನೆಂಟ್‌ ಕರ್ನಲ್ ಪ್ರಸಾದ್‌ ಪುರೋಹಿತ, ಮೇಜರ್ ರಮೇಶ್ ಉಪಾಧ್ಯಾಯ (ಸದ್ಯ ನಿವೃತ್ತ), ಅಜಯ್‌ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಹಾಗೂ ಸಮೀರ್‌ ಕುಲಕರ್ಣಿ ಅವರನ್ನು ಜುಲೈ 31ರಂದು ಖುಲಾಸಗೊಳಿಸಿದೆ.

ಪ್ರಕರಣದ ಆರೋಪಿ ನಂ.10 ದ್ವಿವೇದಿ ಅವರೂ, ಮುಜಾವರ್‌ ಹೇಳಿಕೆಯನ್ನೇ ಉಲ್ಲೇಖಿಸಿದ್ದಾರೆ.

'ಎಟಿಎಸ್‌ ಅಧಿಕಾರಿಯಾಗಿದ್ದ ಮೆಹಬೂಬ್‌ ಮುಜಾವರ್‌ ಮಾಲೆಗಾಂವ್‌ ಪ್ರಕರಣದ ತನಿಖಾಧಿಕಾರಿಗಳಲ್ಲಿ ಒಬ್ಬರು. ಮೋಹನ್‌ ಭಾಗವತ್ ಅವರನ್ನು ಬಂಧಿಸುವಂತೆ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದರು. ಆದರೆ, ಪ್ರಕರಣದಲ್ಲಿ ಭಾಗವತ್‌ ಅವರ ಪಾತ್ರ ಇಲ್ಲದಿರುವುದರಿಂದ, ಅಂತಹ ಕಾನೂನುಬಾಹಿರ ಆದೇಶ ಪಾಲಿಸಲು ಮುಜಾವರ್‌ ನಿರಾಕರಿಸಿದ್ದರು. ಹಾಗಾಗಿಯೇ, ಮುಜಾವರ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಯಿತು ಎಂದು ಆರೋಪಿ ನಂ.10 ಪರ ವಕೀಲ ವಾದಿಸಿದ್ದಾರೆ' ಎಂದಿರುವ ನ್ಯಾಯಾಲಯ, ಮುಜಾವರ್‌ ಅವರ ಹೇಳಿಕೆಗಳನ್ನು ದಾಖಲಿಸುವುದಾದರೆ, ಪೂರಕ ಸಾಕ್ಷ್ಯಗಳನ್ನು ಉಲ್ಲೇಖಿಸುವುದು ಅಗತ್ಯ ಎಂದಿದೆ.

'ಪ್ರಾಸಿಕ್ಯೂಷನ್‌ ಸಾಕ್ಷಿಯಾಗಿದ್ದ ಸಹಾಯಕ ಪೊಲೀಸ್‌ ಆಯುಕ್ತ ಮೋಹನ್‌ ಕುಲಕರ್ಣಿ ಅವರು ಮುಜಾವರ್‌ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆರ್‌ಎಸ್‌ಎಸ್‌ ನಾಯಕನನ್ನು ವಶಕ್ಕೆ ಪಡೆಯಲು ಮುಜಾವರ್‌ ಅವರನ್ನು ಕಳುಹಿಸಲಾಗಿತ್ತು ಎಂಬುದು ಸುಳ್ಳು. ಆದರೆ, ಅವರನ್ನು ತಲೆಮರೆಸಿಕೊಂಡಿದ್ದ ಆರೋಪಿಗಳಾದ ರಾಮ್‌ಜಿ ಕಲ್‌ಸಾಂಗ್ರ ಮತ್ತು ಸಂದೀಪ್‌ ದಾಂಗೆ ಪತ್ತೆಗೆ ಕಳಹಿಸಲಾಗಿತ್ತು ಎಂದಿದ್ದಾರೆ. ಹಾಗೆಯೇ, ಎಟಿಎಸ್‌ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕ್ಷಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಲ್ಲ ಎಂಬುದಾಗಿ ಮುಜಾವರ್‌ ಬಹಿರಂಗವಾಗಿ ಮಾಡಿರುವ ಆರೋಪವನ್ನೂ ಕುಲಕರ್ಣಿ ನಿರಾಕರಿಸಿದ್ದಾರೆ' ಎಂದು ನ್ಯಾ. ಲಹೋತಿ ಉಲ್ಲೇಖಿಸಿದ್ದಾರೆ.

'ಸಿಆರ್‌ಪಿಸಿ ಸೆಕ್ಷನ್‌ 313ರ ಅಡಿಯಲ್ಲಿ ದಾಖಲಿಸಿಕೊಂಡ ಹೇಳಿಕೆಗಳನ್ನು ನ್ಯಾಯಾಲಯದ ಎದುರು ದಾಖಲಿಸಿಲ್ಲ. ಹಾಗಾಗಿ, ಅವುಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲಾಗದು. ಮುಜಾವರ್‌ ಅವರನ್ನು ಸಾಕ್ಷಿ ಎಂದು ನ್ಯಾಯಾಲಯದ ಎದುರು ವಿಚಾರಣೆಗೆ ಒಳಪಡಿಸಿಲ್ಲ. ದಾಖಲೆಗಳನ್ನು ಸಂಬಂಧಪಟ್ಟ ದೃಢ ಮತ್ತು ವಿಶ್ವಾಸಾರ್ಹ ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕು' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries