ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ದೇಶದೆಲ್ಲಡೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುತ್ತಿದೆ. ಈ ಮಧ್ಯೆ ಹೆದ್ದಾರಿಗಳ ಅತಿಕ್ರಮ, ಪಕ್ಕದ ಜಾಗ ಒತ್ತುವರಿ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP) ಹೊರಡಿಸಿದೆ.
ಇದನ್ನು ಪಾಲಿಸಬೇಕು, ಕಟ್ಟುನಿಟ್ಟಾಗಿ ಕ್ರಮ ವಹಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ನಿರ್ದೇಶನ ನೀಡಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಂಟಾಗುವ ಅಡತಡೆ ನಿವಾರಿಸಿ, ಸುರಕ್ಷತೆ ಹೆಚ್ಚಿಸಲು SOP ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕೆಲವೆಡೆ ಹೆದ್ದಾರಿಗಳಲ್ಲಿನ ಒತ್ತುವರಿ ಗುರುತಿಸಲಾಗಿದೆ. ಅಲ್ಲೆಲ್ಲ ಸಂಚಾರ ನಿಯಂತ್ರಣಕ್ಕಾಗಿ ಕ್ರಮಗಳ ಜಾರಿಗೊಳಿಸಿ ತೆರವುಗೊಳಿಸಲಾಗುತ್ತಿದೆ. ಸಚಿವಾಲಯವು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಕಂಪನಿ (NHIDCL) ನ ಎಲ್ಲಾ ಪ್ರಾದೇಶಿಕ ಹಾಗೂ ಯೋಜನಾ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಹೆದ್ದಾರಿಗಳನ್ನು ಪರಿಶೀಲಿಸಬೇಕು.
ಸ್ಥಳೀಯವಾಗಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಮತ್ತು ವಿಭಾಗೀಯ ಅಥವಾ ಯೋಜನಾ ಮಟ್ಟದಲ್ಲಿ ಪ್ರತಿ ತಿಂಗಳಿಗೆ ಒಂದು ಬಾರಿ ಗುತ್ತಿಗೆದಾರರು, ರಿಯಾಯಿತಿದಾರರು ಮತ್ತು ಮೇಲ್ವಿಚಾರಣಾ ಸಲಹೆಗಾರರು ಅತಿಕ್ರಮಣಗಳ ಗುರುತಿಸಬೇಕು. ತ್ವರಿತ ವರದಿ ಮಾಡಬೇಕು ಎಂದು ಸಚಿವಾಲಯ ಸೂಚಿಸಿದೆ.
ಅಷ್ಟೇ ಅಲ್ಲದೇ ಡ್ರೋನ್ ಸಮೀಕ್ಷೆಗಳು ಮತ್ತು ವೈಮಾನಿಕ ಚಿತ್ರ ಸೆರೆಹಿಡಿಯಬೇಕು. ಹೆದ್ದಾರಿ ರಸ್ತೆ ನಿರ್ಮಾಣದ ವೇಳೆ ಸಮೀಕ್ಷೆಗಳನ್ನು ಮೂರು ತಿಂಗಳಿಗೆ ಒಮ್ಮೆ ನಡೆಸಬೇಕು. ದೊಡ್ಡ ನಗರ ಪ್ರದೇಶಗಳಲ್ಲಿ ಮಾಸಿಕ, ಸಣ್ಣ ಪಟ್ಟಣಗಳಲ್ಲಿ ತ್ರೈಮಾಸಿಕ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಬೇಕು. ನಂತರ ಮುಂದಿನ ಕ್ರಮ ಕೈಗೊಳ್ಳಲು ಲಭ್ಯ ಅತಿಕ್ರಮ ಮಾಹಿತಿಯನ್ನು ಸರ್ಕಾರದ "ಡೇಟಾಲೇಕ್" ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಎಸ್‌ಒಪಿಯಲ್ಲಿದೆ.
ಹೈವೇ ಒತ್ತುವರಿದಾರರಿಂದ ದಂಡ ವಸೂಲಿ ಕ್ರಮ
ಹೆದ್ದಾರಿ ಅತಿಕ್ರಮ ಕಂಡು ಬಂದಲ್ಲಿ, ಅದರ ವಿರುದ್ಧ ತ್ವರಿತ ಕಾರ್ಯನಿರ್ವಹಿಸಲು ಹೆದ್ದಾರಿ ಆಡಳಿತ ಅಧಿಕಾರಿಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ (DM) ಅಧಿಕಾರ ನೀಡಿದೆ. ಅವಶ್ಯಕತೆ ಅನ್ನಿಸಿದರೆ ಸ್ಥಳೀಯ ಆಡಳಿತಗಳು ಮತ್ತು ಪೊಲೀಸರ ಸಹಾಯ ಪಡೆಯುವಂತೆ ತಿಳಿಸಲಾಗಿದೆ. ಎಚ್ಚರಿಕೆಗೆ, ತೆರವಿಗೆ ಬಗ್ಗದೇ ಅತಿಕ್ರಮಣ ಮುಂದುವರಿದರೆ, ದಂಡ ವಿಧಿಸಲು ಮತ್ತು ತೆರವಿನ ವೆಚ್ಚ ವಸೂಲಿ ಮಾಡಬೇಕೆಂದು ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿಗಳ ನಿಯಂತ್ರಣ (ಭೂಮಿ ಮತ್ತು ಸಂಚಾರ) ಕಾಯ್ದೆ-2002 ಪ್ರಕಾರ ಹೈವೇ ಜಾಗ ಅತಿಕ್ರಮಿಸಿದವರಿಗೆ ಪ್ರತಿ ಚದರ ಮೀಟರ್ ಭೂಮಿಗೆ 500 ರೂ.ದಂಡ ವಿಧಿಸಬಹುದು. ಕೆಲವೆಡೆ ಭೂಮಿಯ ಮೌಲ್ಯಕ್ಕೆ ಸಮಾನವಾದ ಮೊತ್ತ ವಿಧಿಸಬಹುದು. ಒತ್ತುವರಿ ತೆರವು, ದುರಸ್ತಿಗೆ ಮಾಡಿದ ವೆಚ್ಚವನ್ನು ವಸೂಲಿ ಮಾಡಲಾಗುವುದು ಎಂದು ನಿಯಮ ಹೇಳುತ್ತದೆ. ಆದ್ದರಿಂದ ಹೈವೇ ಅಕ್ಕಪಕ್ಕ ಪೆಟ್ರೋಲ್ ಬಂಕ್‌ಗಳು, ದಾಬಾ, ಇತರ ಕಂಪನಿ ಹಾಗೂ ಖಾಸಗಿ ವ್ಯಕ್ತಿಗಳು ಇನ್ನಿತರ ವ್ಯಕ್ತಿಗಳು ಅತಿಕ್ರಮ ಮಾಡಿದ್ದಲ್ಲಿ SOP ಅಡಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಎಚ್ಚರಿಕೆ ನಿಡಿದೆ.




