HEALTH TIPS

ಬೀದಿ ನಾಯಿಗಳ ನಿಯಂತ್ರಣ: ನ್ಯಾಯಾಲಯದ ಆವರಣದೊಳಗಿನ ಆಹಾರ ವಿಲೇವಾರಿಗೆ SC ನಿರ್ದೇಶನ

 ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸಲು ಅವುಗಳ ಶಾಶ್ವತ ಸ್ಥಳಾಂತರಕ್ಕೆ ನಿರ್ದೇಶನ ನೀಡಿದ್ದ ಬೆನ್ನಲ್ಲೇ, ತನ್ನ ಆವರಣದಲ್ಲಿ ಉಳಿದ ಆಹಾರವನ್ನು ಹೊರಗೆ ಬಿಸಾಡದೆ, ಸಂಪೂರ್ಣ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ಆವರಣದಲ್ಲೂ ಬೀದಿ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿದೆ.


'ಬಳಸದೇ ಉಳಿದ ಆಹಾರವನ್ನು ಬೇಕಾಬಿಟ್ಟಿಯಾಗಿ ಬಿಸಾಡದೆ, ನಿರ್ದಿಷ್ಟ ತೊಟ್ಟಿಯಲ್ಲೇ ವಿಲೇವಾರಿ ಮಾಡಬೇಕು. ತೆರೆದ ಜಾಗದಲ್ಲಿ ಆಹಾರಗಳನ್ನು ಬಿಸಾಡಬಾರದು ಅಥವಾ ಮುಚ್ಚಳವಿಲ್ಲದ ತೊಟ್ಟಿಯಲ್ಲಿ ಹಾಕಬಾರದು. ಆಹಾರ ಅರಸುತ್ತಾ ಅಲೆಯುವ ಪ್ರಾಣಿಗಳನ್ನು ನಿಯಂತ್ರಿಸಲು ಇರುವ ಪರಿಣಾಮಕಾರಿ ಮಾರ್ಗವಿದು. ಹೀಗೆ ಮಾಡಿದಲ್ಲಿ ನಾಯಿ ಕಡಿತ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಬಹುದು ಹಾಗೂ ನೈರ್ಮಲ್ಯ ಮಾನದಂಡಗಳನ್ನು ಪಾಲಿಸಬಹುದು. ಎಲ್ಲರ ಸುರಕ್ಷತೆಗೆ ಮಾರ್ಗಸೂಚಿಗಳ ಪಾಲನೆ ಅತ್ಯಗತ್ಯ' ಎಂದು ಸುಪ್ರೀಂ ಕೋರ್ಟ್ ಸುತ್ತೋಲೆಯಲ್ಲಿ ಹೇಳಿದೆ.

ದೆಹಲಿ: ಬೀದಿ ನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ಸೂಚನೆಆಶ್ರಯ ತಾಣಗಳಲ್ಲಿರಲಿ ಬೀದಿನಾಯಿ; ರಕ್ಷಣೆಗೆ ಬಂದರೆ ಕಠಿಣ ಕ್ರಮ: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಆರ್‌.ಮಹಾದೇವನ್‌ ಅವರ ನೇತೃತ್ವದ ನ್ಯಾಯಪೀಠವು ಬೀದಿ ನಾಯಿಗಳ ಸ್ಥಳಾಂತರಿಸುವಿಕೆ ಬಗ್ಗೆ ಅಧಿಕಾರಿಗಳಿಗೆ ಸೋಮವಾರ ಕೆಲವು ಸೂಚನೆಗಳನ್ನು ನೀಡಿತ್ತು.

ನ್ಯಾಯಾಲಯದ ಆದೇಶ ಪಾಲನೆ ಕಾರ್ಯಕ್ಕೆ ಅಡ್ಡಿ ಉಂಟುಮಾಡುವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿತ್ತು.

ಪ್ರಾಣಿ ಸಂರಕ್ಷಣೆಗೆ ಮುಂದಾಗುವ ಕಾರ್ಯಕರ್ತರು ಮತ್ತು 'ಪ್ರಾಣಿ ಪ್ರೇಮಿಗಳು' ಎಂದು ಕರೆಸಿಕೊಳ್ಳುವವರಿಗೆ ರೇಬಿಸ್‌ಗೆ ಬಲಿಯಾದ ಮಕ್ಕಳನ್ನು ಮರಳಿ ತಂದುಕೊಡಲು ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.

ನಾಯಿಗಳ ಸೆರೆ ಹಿಡಿಯುವ ಕಾರ್ಯವನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬುದು ಅಧಿಕಾರಿಗಳಿಗೆ ಬಿಟ್ಟಿದ್ದು. ನಗರ ಮತ್ತು ನಗರದ ಹೊರವಲಯವನ್ನು ಬೀದಿ ನಾಯಿಗಳಿಂದ ಮುಕ್ತ ಗೊಳಿಸುವುದು ಮೊತ್ತಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದೂ ಖಡಕ್‌ ಎಚ್ಚರಿಕೆ ನೀಡಿತ್ತು.

ಆರು ವಾರಗಳ ಬಳಿಕ ಮತ್ತೆ ಅರ್ಜಿ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತ್ತು. ಬೀದಿ ನಾಯಿ ಹಾವಳಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ರೇಬಿಸ್‌ ಹೆಚ್ಚಾಗಿರುವ ಕಾರಣ ಜುಲೈ 28ರಂದು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries