HEALTH TIPS

SIR ಕುರಿತ ಅಪಪ್ರಚಾರ, ಮತಗಳ್ಳತನ ಆರೋಪಗಳಿಗೆ ಹೆದರಲ್ಲ: CEC ಜ್ಞಾನೇಶ್ ಕುಮಾರ್

ನವದೆಹಲಿ: ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ಉದ್ದೇಶದಿಂದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಕಾಂಗ್ರೆಸ್‌ ಹಾಗೂ 'ಇಂಡಿಯಾ' ಬಣದ ಪಕ್ಷಗಳು ತಪ್ಪು ಮಾಹಿತಿ ಹರಡುತ್ತಿರುವುದು ಕಳವಳಕಾರಿ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್ ಭಾನುವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಿಇಸಿ, ಹಿಂದಿನ ಚುನಾವಣೆಗಳಲ್ಲಿ ಒಂದೇ ವ್ಯಕ್ತಿ ಎರಡೆರಡು ಬಾರಿ ಮತ ಚಲಾಯಿಸಿದ್ದಾರೆ, ಮತಗಳ್ಳತನ ನಡೆದಿದೆ ಎಂಬ ಆರೋಪಗಳು ಆಧಾರರಹಿತವಾದವು ಎಂದಿದ್ದಾರೆ.

'ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಕುರಿತು ಕೆಲವು ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ತಪ್ಪು ಮಾಹಿತಿ ಹರಡುತ್ತಿರುವುದು ಅತ್ಯಂತ ಕಳವಳಕಾರಿ. ಬಿಹಾರದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ಎಲ್ಲ ಪಕ್ಷಗಳಿಗೆ ಸಲಹೆ ನೀಡಿದೆ. ಇನ್ನೂ 15 ದಿನಗಳು ಬಾಕಿ ಇವೆ' ಎಂದಿದ್ದಾರೆ.

'ಚುನಾವಣಾ ಆಯೋಗದ ಬಾಗಿಲು ಎಲ್ಲರಿಗೂ ತೆರೆದಿವೆ. ಎಸ್‌ಐಆರ್‌ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಬೂತ್‌ ಮಟ್ಟದ ಅಧಿಕಾರಿಗಳು ಮತ್ತು ಏಜೆಂಟ್‌ಗಳು ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ' ಎಂದೂ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಆಯೋಗವು ಪಕ್ಷಗಳ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಆಯೋಗದ ಮುಂದೆ ಆಡಳಿತ ಮತ್ತು ವಿರೋಧ ಪಕ್ಷ ಎರಡೂ ಸಮಾನ ಎಂದು ಪ್ರತಿಪಾದಿಸಿದ್ದಾರೆ.

'ಚುನಾವಣೆಗೆ ಸಂಬಂಧಿಸಿದಂತೆ 45 ದಿನಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸದೆ, ಮತಗಳ್ಳತನ ಆರೋಪಗಳನ್ನು ಮಾಡುವುದು ಸಂವಿಧಾನಕ್ಕೆ ಮಾಡುವ ಅಪಮಾನ' ಎಂದು ಎಚ್ಚರಿಸಿದ್ದಾರೆ.

'ಚುನಾವಣಾ ಆಯೋಗವಾಗಲೀ, ಜನರಾಗಲೀ ಇಂತಹ 'ಆಧಾರರಹಿತ' ಆರೋಪಗಳಿಗೆ ಹೆದರುವುದಿಲ್ಲ. ಕೆಲವರು ಮಾಡುತ್ತಿರುವ ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳದೆ ಆಯೋಗವು ಎಲ್ಲ ವರ್ಗದ ಮತದಾರರೊಂದಿಗೆ ದೃಢವಾಗಿ ನಿಲ್ಲಲಿದೆ' ಎಂದು ಸ್ಪಷ್ಟಪಡಿಸಿ‌ದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಕಾಂಗ್ರೆಸ್‌ ಪಕ್ಷ, ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲಿ ಅಕ್ರಮಗಳಾಗಿವೆ ಎಂದೂ ಆರೋಪಿಸಿದೆ.

ಇದೇ ವಿಚಾರವಾಗಿ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ', ಬಿಹಾರದಲ್ಲಿ ಇಂದಿನಿಂದ (ಆಗಸ್ಟ್‌ 17ರಿಂದ) 'ಮತದಾರನ ಅಧಿಕಾರ ಯಾತ್ರೆ' ನಡೆಸುತ್ತಿದೆ. ಈ ಯಾತ್ರೆಯು ಸುಮಾರು 1,300 ಕಿ.ಮೀ. ಸಾಗಲಿದ್ದು, ರಾಜ್ಯದ 20 ಜಿಲ್ಲೆಗಳನ್ನು ಹಾದುಹೋಗಲಿದೆ.

ಸಮಾವೇಶದ ವೇಳೆ ಮಾತನಾಡಿರುವ ರಾಹುಲ್‌, ಚುನಾವಣಾ ಆಯೋಗವು ಫಲಿತಾಂಶವನ್ನು ಕದಿಯಲು ಬಿಜೆಪಿಯೊಂದಿಗೆ ಕೈಜೋಡಿಸಿದೆ. ಬಿಹಾರ ಚುನಾವಣೆಯನ್ನು ಪಿತೂರಿಯಿಂದ ಗೆಲ್ಲಲು ಇಂಡಿಯಾ ಬಣ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries