HEALTH TIPS

ಏಷ್ಯನ್ ಪೇಂಟ್ಸ್ ಕಥೆ. 1942ರಲ್ಲಿ ನಾಲ್ವರು ಹುಡುಗರು ಕಟ್ಟಿದ ಕಂಪನಿ; ಆರು ದಶಕಗಳಿಂದ ಇದು ನಂ. 1

ಒಂದು ಬಾಗಿಲು ಮುಚ್ಚಿದರೆ, ಇನ್ನೂ ಹಲವು ಬಾಗಿಲು ತೆರೆದುಕೊಳ್ಳುತ್ತವಂತೆ. ಏಷ್ಯನ್ ಪೇಂಟ್ಸ್ ಎನ್ನುವ ಪೇಂಟಿಂಗ್ ದಿಗ್ಗಜನ ವಿಚಾರದಲ್ಲಿ ಆಗಿದ್ದೂ ಇದೆ. 1942ರಲ್ಲಿ ಮುಂಬೈನ ಒಂದು ಸಣ್ಣ ಗ್ಯಾರೇಜ್​ನಲ್ಲಿ ಆರಂಭವಾದ ಏಷ್ಯನ್ ಪೇಂಟ್ಸ್ ಇವತ್ತು ವಿಶ್ವದ ಪ್ರಮುಖ ಪೇಂಟ್ ಕಂಪನಿಗಳಲ್ಲಿ ಒಂದೆನಿಸಿದೆ.

ಆದರೆ, ಇದು ದಿಗ್ಗಜ ಸಂಸ್ಥೆಯಾಗಿ ಮಾಡಿದ ಪ್ರಯಾಣ ಅಷ್ಟು ಸುಗಮವಾಗಿರಲಿಲ್ಲ. ಒಂದು ಅವಕಾಶದ ಬಾಗಿಲು ಮುಚ್ಚಿದರೆ ಹಲವು ಅವಕಾಶಗಳನ್ನು ಬಳಸಿಕೊಂಡು ಇದು ಹಲವು ದಶಕಗಳ ಕಾಲ ಭಾರತದ ಪೇಂಟಿಂಗ್ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾಗಿ ನೆಲೆ ನಿಲ್ಲಲು ಯಶಸ್ವಿಯಾಗಿದೆ.

ಏಷ್ಯನ್ ಪೇಂಟ್ಸ್​ಗೆ ದಾರಿ

ಅದು ಎರಡನೇ ವಿಶ್ವ ಮಹಾಯುದ್ಧದ ಸಂದರ್ಭ. ಆಗ ಭಾರತದ ಪೇಂಟಿಂಗ್ ಮಾರುಕಟ್ಟೆಯಲ್ಲಿ ಇದ್ದದ್ದು ವಿದೇಶೀ ಬ್ರ್ಯಾಂಡ್​ಗಳು ಮತ್ತು ಶಾಲಿಮಾರ್ ಮಾತ್ರ. ಚಂಪಕ್‌ಲಾಲ್ ಚೋಕ್ಸಿ, ಚಿಮನ್‌ಲಾಲ್ ಚೋಕ್ಸಿ, ಸೂರ್ಯಕಾಂತ್ ದಾನಿ ಮತ್ತು ಅರವಿಂದ್ ವಕೀಲ್, ಈ ನಾಲ್ವರು ಸ್ನೇಹಿತರು ಸೇರಿ ನೆಪ್ಚೂನ್ ಟ್ರೇಡಿಂಗ್ ಎನ್ನುವ ಉದ್ದಿಮೆ ಆರಂಭಿಸಿದರು. ಮೊದಲಿಗೆ ವಿದೇಶೀ ಪೇಂಟ್​ಗಳನ್ನು ಇವರು ಮಾರುತ್ತಿದ್ದರು. ಆದರೆ, ದುಬಾರಿ ಬೆಲೆ, ಕಳಪೆ ಗುಣಮಟ್ಟದ ಪೇಂಟ್​ಗಳನ್ನು ಮಾರಲು ಇವರಿಗೆ ಮನಸ್ಸಾಗಲಿಲ್ಲ. 1942ರಲ್ಲಿ ಈ ನಾಲ್ವರು ತಾವೇ ಯಾಕೆ ಪೇಂಟ್ ತಯಾರಿಸಬಾರದು ಎಂದು ನಿರ್ಧರಿಸಿದರು.

ಈ ಗೆಳೆಯರು ಪೇಂಟ್ ತಂತ್ರಜ್ಞರಲ್ಲ, ಹಣವಂತರಲ್ಲ. ಆದರೆ, ಹೇಗೋ ಪಿಗ್ಮೆಂಟ್ ಆಯಿಲ್ ಹೊಂದಿಸಿ ಪೇಂಟ್ ತಯಾರಿಸಿದರು. ಬಂಡವಾಳದ ವ್ಯವಸ್ಥೆ ಕೂಡ ಮಾಡಿದರು. 1942ರಲ್ಲಿ ಮುಂಬೈ ಒಂದು ಸಣ್ಣ ಗ್ಯಾರೇಜ್​ನಲ್ಲಿ ‘ಏಷ್ಯನ್ ಆಯಿಲ್ ಮತ್ತು ಪೇಂಟ್ ಕಂಪನಿ’ ಪ್ರಾರಂಭಿಸಿದರು. ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಬಣ್ಣಗಳನ್ನು ತಯಾರಿಸುವುದು ಅವರ ಗುರಿಯಾಗಿತ್ತು.

ಮುಂಬೈ, ದೆಹಲಿ ಅಥವಾ ಕೋಲ್ಕತ್ತಾದಂತಹ ದೊಡ್ಡ ನಗರಗಳಲ್ಲಿನ ಮಾರಾಟಗಾರರು ಏಷ್ಯನ್ ಪೇಂಟ್ಸ್ ಸರಕುಗಳನ್ನು ಮಾರಲು ಹಿಂದೇಟು ಹಾಕುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಹೊಸ ಕಂಪನಿಯ ಸರಕುಗಳನ್ನು ಮಾರಿದರೆ ಹಳೆಯ ಹಾಗೂ ದುಬಾರಿ ಬೆಲೆಯ ಪೇಂಟ್ಸ್ ಮಾರುತ್ತಿದ್ದ ಕಂಪನಿಗಳು ತಮಗೆ ಪೇಂಟ್ಸ್ ಸರಬರಾಜು ನಿಲ್ಲಿಸಬಹುದು ಎನ್ನುವ ಭಯ ಮಾರಾಟಗಾರರಿಗೆ ಇತ್ತು. ಹೀಗಾಗಿ, ಏಷ್ಯನ್ ಪೇಂಟ್ಸ್ ಪ್ರಯಾಣದ ಆರಂಭಿಕ ದಿನಗಳು ಬಹಳ ಒತ್ತಡ ಹಾಗೂ ಕಠಿಣವಾಗಿದ್ದುವು.

ಆದರೆ, ದೃತಿಗೆಡದ ಚಂಪಕ್​ಲಾಲ್ ಚೋಕ್ಸಿ, ಚಿಮನ್​ಲಾಲ್ ಚೋಕ್ಸಿ, ಸೂರ್ಯಕಾಂತ್ ದಾನಿ ಮತ್ತು ಅರವಿಂದ್ ವಕೀಲ್ ಅವರು ತಮ್ಮ ಬ್ಯುಸಿನೆಸ್ ಬೆಳೆಸಲು ಹೊಸ ಮಾರ್ಗ ಹುಡುಕಿದರು. ನಗರಗಳ ಬದಲು ಹಳ್ಳಿಗಳಲ್ಲಿ ಮಾರುವ ನಿರ್ಧಾರಕ್ಕೆ ಬಂದರು. ಪೇಂಟ್​ಗಳನ್ನು ಸಣ್ಣ ಸಣ್ಣ ಪ್ಯಾಕ್ ಮೂಲಕ ಗ್ರಾಮೀಣ ಮಾರುಕಟ್ಟೆಗಳಲ್ಲಿ ಮಾರತೊಡಗಿದರು. ಈ ಮೂಲಕ ಏಷ್ಯನ್ ಪೇಂಟ್ಸ್ ಬಹಳ ಮೂಲಭೂತವಾದ ಮತ್ತು ಪ್ರಬಲವಾದ ಡಿಸ್ಟ್ರಿಬ್ಯೂಶನ್ ನೆಟ್ವರ್ಕ್ ರೂಪಿಸಿತು.

ನಾವೀನ್ಯತೆ ಮತ್ತು ಬ್ರ್ಯಾಂಡಿಂಗ್

1950 ರ ಸುಮಾರಿಗೆ, ಏಷ್ಯನ್ ಪೇಂಟ್ಸ್ ‘ಟ್ರಾಕ್ಟರ್ ಡಿಸ್ಟೆಂಪರ್’ ಎಂಬ ಹೊಸ ಉತ್ಪನ್ನ ಪರಿಚಯಿಸಿತು. ಡಿಸ್ಟೆಂಪರ್ ಎಂಬುದು ಸಾಮಾನ್ಯವಾಗಿ ಸೀಮೆಸುಣ್ಣದಂತೆ ಒರಟಾಗಿರುವ ಒಂದು ರೀತಿಯ ಬಣ್ಣವಾಗಿದೆ. ‘ಟ್ರಾಕ್ಟರ್ ಡಿಸ್ಟೆಂಪರ್’ ಎಂಬುದು ನೀರಿನಲ್ಲಿ ತೊಳೆಯಬಹುದಾದ ಒಂದು ರೀತಿಯ ಡಿಸ್ಟೆಂಪರ್ ಆಗಿತ್ತು. ಪರಿಣಾಮವಾಗಿ, ಈ ಹೊಸ ಬಣ್ಣವು ಕಡಿಮೆ-ಗುಣಮಟ್ಟದ ಡ್ರೈ ಡಿಸ್ಟೆಂಪರ್ ಮತ್ತು ದುಬಾರಿ ಎಮಲ್ಷನ್ ಬಣ್ಣಗಳ ನಡುವೆ ಹೊಸ ಸ್ಥಾನವನ್ನು ತುಂಬಿತು. ಈ ಬಣ್ಣವು ಅಗ್ಗದ ಮತ್ತು ಬಾಳಿಕೆ ಬರುವಂತಹದ್ದಾಗಿರುವುದರಿಂದ ಸಾಮಾನ್ಯ ಜನರಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿತು.

ಮಾರುಕಟ್ಟೆಯಲ್ಲಿ ಹೊಸ ಡಿಸ್ಟೆಂಪರ್ ಅನ್ನು ಜನಪ್ರಿಯಗೊಳಿಸಲು, ಕಂಪನಿಯು 1954 ರಲ್ಲಿ ಒಂದು ಮ್ಯಾಸ್ಕಾಟ್ ಅನ್ನು ರಚಿಸಿತು. ಜನಪ್ರಿಯ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ‘ಗಟ್ಟು’ ಎಂಬ ಈ ಚೇಷ್ಟೆಯ ಸಿಹಿ ಹುಡುಗನನ್ನು ರಚಿಸಿದರು. “ಕೋಪ ಕಳೆದುಕೊಳ್ಳಬೇಡಿ, ಟ್ರ್ಯಾಕ್ಟರ್ ಡಿಸ್ಟೆಂಪರ್ ಬಳಸಿ” ಎಂಬುದು ಈ ಡಿಸ್ಟೆಂಪರ್​ನ ಟ್ಯಾಗ್​ಲೈನ್ ಆಯಿತು. ಈ ಮ್ಯಾಸ್ಕಾಟ್ ಭಾರತೀಯರ ಹೃದಯದಲ್ಲಿ ಸ್ಥಾನ ಪಡೆಯಿತು. ಮತ್ತು ‘ಗಟ್ಟು’ ಕ್ರಮೇಣ ಈ ಬ್ರ್ಯಾಂಡ್‌ನ ಸಂಕೇತವಾಗಿ ಪ್ರಸಿದ್ಧವಾಯಿತು.

ಇಸ್ರೋಗಿಂತಲೂ ಮೊದಲು ಸೂಪರ್‌ಕಂಪ್ಯೂಟರ್ ಬಳಸಿದ ಏಷ್ಯನ್ ಪೇಂಟ್ಸ್

1970 ರಲ್ಲಿ, ಭಾರತ ಮಾತ್ರವಲ್ಲ, ಪ್ರಪಂಚದ ಜನರಿಗೆ ಕಂಪ್ಯೂಟರ್‌ಗಳು ಅಥವಾ ಅಂತಹ ಯಾವುದೇ ತಂತ್ರಜ್ಞಾನದ ಪರಿಚಯವಿರಲಿಲ್ಲ. ಮತ್ತು ಆ ಸಮಯದಲ್ಲಿ, ಏಷ್ಯನ್ ಪೇಂಟ್ಸ್ ಸೂಪರ್ ಕಂಪ್ಯೂಟರ್ ಅನ್ನು ಖರೀದಿಸಿತು. ಆಗ ಇಸ್ರೋ ಬಳಿಯೂ ಅಂಥ ಕಂಪ್ಯೂಟರ್ ಇರಲಿಲ್ಲ. ಈ ಸೂಪರ್ ಕಂಪ್ಯೂಟರ್ ಏಷ್ಯನ್ ಪೇಂಟ್ಸ್​ನ ಒಂದು ಮಾಸ್ಟರ್ ಸ್ಟ್ರೋಕ್ ಎನಿಸಿತ್ತು. ಮಾರುಕಟ್ಟೆ ಬೇಡಿಕೆಯನ್ನು ಅರ್ಥಮಾಡಿಕೊಳ್ಳಲು, ಪೂರೈಕೆ ಸರಪಳಿಯನ್ನು ಅತ್ಯುತ್ತಮವಾಗಿಸಲು ಮತ್ತು ಅವರ ಲಾಜಿಸ್ಟಿಕ್ಸ್ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡಿತು. ಪರಿಣಾಮವಾಗಿ, ಏಷ್ಯನ್ ಪೇಂಟ್ಸ್‌ನ ವ್ಯವಹಾರವು ಕ್ರಮೇಣ ಬೆಳೆಯಲು ಪ್ರಾರಂಭಿಸಿತು.

ಮಾರುಕಟ್ಟೆಯ ಹೊಸ ಕಿಂಗ್ ಎನಿಸಿದ ಏಷ್ಯನ್ ಪೇಂಟ್ಸ್

1942ರಲ್ಲಿ ಸ್ಥಾಪನೆಯಾದ ಏಷ್ಯನ್ ಪೇಂಟ್ಸ್ 25 ವರ್ಷದಲ್ಲಿ ಭಾರತದ ನಂಬರ್ ಒನ್ ಪೇಂಟ್ ಕಂಪನಿಯಾಗಿ ಬೆಳೆಯಿತು. 1967ರಿಂದ ಹಿಡಿದು ಇಲ್ಲಿಯವರೆಗೆ ಏಷ್ಯನ್ ಪೇಂಟ್ಸ್​ನ ನಂಬರ್ ಒನ್ ಪಟ್ಟ ಸತತವಾಗಿ ಉಳಿದುಕೊಂಡು ಬಂದಿದೆ. ಏಷ್ಯನ್ ಪೇಂಟ್ಸ್ ಸಂಸ್ಥಾಪಕರಿಗೆ ಭಾರತ ಮಾತ್ರವಲ್ಲ, ಜಗತ್ತನ್ನು ಗೆಲ್ಲುವ ಉಮೇದಿತ್ತು. 1978ರಲ್ಲಿ ಫಿಜಿ ಮಾರುಕಟ್ಟೆಗೆ ಏಷ್ಯನ್ ಪೇಂಟ್ಸ್ ಪರಿಚಯಿಸಿದರು. ಇವತ್ತು ಇದು 15ಕ್ಕೂ ಹೆಚ್ಚು ದೇಶಗಳಲ್ಲಿ ಬ್ಯುಸಿನೆಸ್ ಮಾಡುತ್ತಿದೆ.

ಕಾಲ ಕಳೆದಂತೆ, ಪೇಂಟ್ ಮಾರುಕಟ್ಟೆಯೂ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ಆದರೆ ಭವಿಷ್ಯದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಏಷ್ಯನ್ ಪೇಂಟ್ಸ್ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಸ್ತುತ, ಇದು ಪೇಂಟ್ ಬ್ಯುಸಿನೆಸ್​ಗೆ ಮಾತ್ರ ಸೀಮಿತವಾಗಿಲ್ಲ, ಇಂಟೀರಿಯರ್ ಡಿಸೈನಿಂಗ್, ಹೋಮ್ ಡಿಕೋರೇಶನ್ ಸರ್ವಿಸ್ ಕೂಡ ನೀಡುತ್ತದೆ. ಮಾಡ್ಯೂಲಾರ್ ಕಿಚನ್, ವಾರ್​ಡ್ರೋಬ್, ಬಾತಿಂಗ್ ಫಿಟ್ಟಿಂಗ್ಸ್, ಡಿಸೈನರ್ ವಾಲ್​ಪೇಪರ್ ಇತ್ಯಾದಿ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದಾರೆ.

ಭವಿಷ್ಯದಲ್ಲಿ ಏನಾಗುತ್ತದೆ?

ಏಷ್ಯನ್ ಪೇಂಟ್ಸ್ ಕಂಪನಿ ಮೊದಲಿಂದಲೂ ಸ್ಥಿರವಾಗಿ ಬೆಳೆದಿದೆ. 60 ವರ್ಷಗಳಿಗೂ ಹೆಚ್ಚು ಕಾಲ ಶೇ. 20ರಂತೆ ಬೆಳವಣಿಗೆ ಕಂಡಿದೆ. ನಾಯಕತ್ವ ಬದಲಾವಣೆ, ಕೌಟುಂಬಿಕ ವಿವಾದ ಹೀಗೆ ಯಾವುವೂ ಕೂಡ ಏಷ್ಯನ್ ಪೇಂಟ್ಸ್ ಬುಡವನ್ನು ಅಲುಗಾಡಿಸಲು ಆಗಿಲ್ಲ. ಇಂದಿಗೂ ಕೂಡ ಸಂಸ್ಥೆಯು ಹೊಸ ಟೆಕ್ನಾಲಜಿಗಳನ್ನು ಸ್ವೀಕರಿಸುತ್ತದೆ, ಹೂಡಿಕೆ ಮಾಡುತ್ತದೆ, ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಯತ್ನಿಸುತ್ತಲೇ ಇರುತ್ತದೆ. ಇದರಿಂದಾಗಿಯೇ, ಮಾರುಕಟ್ಟೆಯ ಕಠಿಣ ಸ್ಪರ್ಧೆಯಲ್ಲೂ ಏಷ್ಯನ್ ಪೇಂಟ್ಸ್ ಸುದೀರ್ಘವಾಗಿ ಅಗ್ರ ಪಟ್ಟ ಕಾಯ್ದುಕೊಳ್ಳಲು ಯಶಸ್ವಿಯಾಗಿದೆ. ಗಮನಿಸಿ, ಭಾರತದಲ್ಲಿ ಯಾವುದೇ ಕಂಪನಿಯು ಆರು ದಶಕಗಳ ಸುದೀರ್ಘ ಕಾಲ ನಂಬರ್ ಒನ್ ಸ್ಥಾನ ಹೊಂದಿದ ಉದಾಹರಣೆಯೇ ಇಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries