ಆಕಳಿಕೆ (yawn) ಯಾರಿಗೆ ಬರಲ್ಲ ಹೇಳಿ? ಒಮ್ಮೆ ಆರಂಭವಾದರೆ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಅಷ್ಟೇ ಅಲ್ಲ, ಇದೊಂದು ಸಾಂಕ್ರಾಮಿಕದಂತೆ. ಪಕ್ಕದಲ್ಲಿರುವ ಯಾರಾದರೂ ಕುಳಿತು ಆಕಳಿಸುವುದನ್ನು ನೋಡಿದರೂ ಆಕಳಿಕೆ ಬರುತ್ತದೆ. ಕೆಲವೊಮ್ಮೆ ಇದು ಬಹಳ ವಿಚಿತ್ರ ಅನಿಸುತ್ತೆ.
ಆದರೆ ಈ ರೀತಿ ಆಗುವುದಕ್ಕೆ ಕಾರಣವಿದೆ ಎಂದರೆ ನೀವು ನಂಬುತ್ತೀರಾ? ಹೌದು. ಆಕಳಿಕೆ ಬಂದರೆ ನಿದ್ರೆ ಬರುತ್ತೆ ಅನ್ನುವ ನಂಬಿಕೆ ಇತ್ತು. ಆದರೆ ಇದಕ್ಕೂ ಮಿಗಿಲಾದ ಕಾರಣವಿದೆ. ಆಕಳಿಕೆ ನಿಮ್ಮ ದೇಹ ನಿಮಗೆ ನೀಡುವ ಸೂಚನೆ. ನೀವು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹಾಗಾದರೆ ಪದೇ ಪದೇ ಆಕಳಿಕೆ ಬರುವುದು ಒಳ್ಳೆಯದೇ? ಅದಕ್ಕೆ ಕಾರಣಗಳೇನು? ಇದು ಯಾವ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ? ತಜ್ಞರು ಏನು ಹೇಳುತ್ತಾರೆ? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪದೇ ಪದೇ ಆಕಳಿಕೆ ಬರುವುದಕ್ಕೆ ಕಾರಣವೇನು?
ಆಕಳಿಕೆ ಎಲ್ಲರಲ್ಲಿಯೂ ಕಂಡುಬರುವುದು ಸಾಮಾನ್ಯ. ಆದರೆ ಅದು ಏಕೆ ಬರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ, ಯಾರಾದರೂ ಆಕಳಿಸಿದಾಗ, ಅದನ್ನು ನಿದ್ರೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನಿದ್ರಾಹೀನತೆಯು ಕೂಡ ಆಕಳಿಕೆಗೆ ಕಾರಣವಾಗಬಹುದು. ಮಾತ್ರವಲ್ಲ ಅತಿಯಾದ ಆಯಾಸವು ಕೂಡ ಆಕಳಿಕೆಗೆ ಕಾರಣವಾಗಬಹುದು. ಹೌದು. ವ್ಯಕ್ತಿಗೆ ಸರಿಯಾಗಿ ವಿಶ್ರಾಂತಿ ಸಿಗದಿದ್ದಾಗ ಅಥವಾ ದೇಹ ಅತಿಯಾಗಿ ದಣಿದಿದ್ದಾಗಲೂ ನಿರಂತರವಾಗಿ ಆಕಳಿಕೆ ಬರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ನಿರಂತರವಾಗಿ ಆಕಳಿಕೆ ಬರುವುದು, ನಿಮ್ಮ ದೇಹವು ಹೆಚ್ಚಿನ ವಿಶ್ರಾಂತಿಯನ್ನು ಕೇಳುತ್ತಿದೆ ಎಂದರ್ಥ. ಸ್ಲೀಪ್ ಅಪ್ನಿಯಾ ಮತ್ತು ನಾರ್ಕೊಲೆಪ್ಸಿಯಂತಹ ನಿದ್ರೆಯ ಸಮಸ್ಯೆಗಳು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರದಂತೆ ತಡೆಯಬಹುದು, ಇದು ಆಕಳಿಕೆ ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಕೂಡ ಆಕಳಿಕೆ ಬರುವುದಕ್ಕೆ ಕಾರಣವಾಗಬಹುದು. ಆದ್ದರಿಂದ, ಸಾಧ್ಯವಾದಷ್ಟು ಆತಂಕ ಮತ್ತು ಆಲಸ್ಯವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಜೊತೆಗೆ ಒತ್ತಡದಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಒತ್ತಡ ಹೆಚ್ಚಾದಾಗಲೂ, ಆಕಳಿಕೆ ಹೆಚ್ಚಾಗಿ ಕಂಡುಬರುತ್ತದೆ. ಇದಲ್ಲದೆ, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಆಕಳಿಕೆ ಹೆಚ್ಚಾಗುತ್ತದೆ ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳ ಸಂಕೇತವಾಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಮಗೂ ಕೂಡ ಆಗಾಗ ಆಕಳಿಕೆ ಬರುತ್ತಿದ್ದರೆ ಅದರ ಜೊತೆಗೆ ಎದೆ ನೋವು ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಕೆಲವೊಮ್ಮೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಇಳಿಕೆ ಸಹ ಆಕಳಿಕೆಗೆ ಕಾರಣವಾಗಬಹುದು. ಆದ್ದರಿಂದ, ಸರಿಯಾದ ರೀತಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಿ. ಹೆಚ್ಚುವರಿಯಾಗಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದರಿಂದಲೂ ಸಹ ಆಕಳಿಕೆ ಬರಬಹುದು ಎಂದು ತಜ್ಞರು ಹೇಳುತ್ತಾರೆ. ಮಾತ್ರವಲ್ಲ ದೇಹದ ನಿರ್ಜಲೀಕರಣವು ನಿರಂತರ ಆಕಳಿಕೆಗೆ ಕಾರಣವಾಗಬಹುದು ಎಂದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಹಾಗಾಗಿ ಹೆಚ್ಚು ನೀರು ಕುಡಿಯಿರಿ.
ನಾವು ಆಕಳಿಸುವುದಕ್ಕೆ ಕಾರಣವೇನು?
ಆಕಳಿಕೆ ಬರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಮುಖ್ಯ ಕಾರಣವೆಂದರೆ, ಇದು ಮೆದುಳಿನ ಉಷ್ಣತೆಯನ್ನು ನಿಯಂತ್ರಿಸುವುದಕ್ಕೆ ಸಹಾಯ ಮಾಡುತ್ತದೆ. ಅಂದರೆ ಆಕಳಿಕೆಯು ಮೆದುಳನ್ನು ತಂಪಾಗಿಸಲು ಮತ್ತು ಸರಿಯಾದ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಮಾತ್ರವಲ್ಲ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ ಮೆದುಳಿನಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.




