ಪ್ರತಿಭಟನೆಗಳಿಗೆ ಕಾರಣಗಳು, ಹಣಕಾಸು ನೆರವು, ಅಂತಿಮ ಫಲಿತಾಂಶಗಳು ಮತ್ತು ತೆರೆಮರೆಯಲ್ಲಿನ ರೂವಾರಿಗಳನ್ನು ವಿಶ್ಲೇಷಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು(ಎಸ್‌ಒಪಿ) ಸಿದ್ಧಪಡಿಸುವಂತೆಯೂ ಅವರು ಸೂಚಿಸಿದ್ದಾರೆ.
ಗುಪ್ತಚರ ಸಂಸ್ಥೆಯು(ಐಬಿ) ಜುಲೈ ಕೊನೆಯ ವಾರದಲ್ಲಿ ದಿಲ್ಲಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ 'ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಗಳ ಸಮ್ಮೇಳನ-2025'ರಲ್ಲಿ ಶಾ ಈ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶಾ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ BPR&D ಅಪರಾಧ ತನಿಖಾ ಇಲಾಖೆಗಳ(ಸಿಐಡಿ) ವರದಿಗಳು ಸೇರಿದಂತೆ ಹಳೆಯ ಪ್ರಕರಣಗಳ ಕಡತಗಳಿಗಾಗಿ ರಾಜ್ಯಗಳ ಪೋಲಿಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ತಂಡವೊಂದನ್ನು ರಚಿಸುವ ಪ್ರಕ್ರಿಯೆಯಲ್ಲಿದೆ.
ಅಧಿಕಾರಿಯೋರ್ವರ ಪ್ರಕಾರ,ಇಂತಹ ಪ್ರತಿಭಟನೆಗಳಿಗೆ ಹಣಕಾಸು ನೆರವುಗಳನ್ನು ಪರಿಶೀಲಿಸಲು ಜಾರಿ ನಿರ್ದೇಶನಾಲಯ(ಈ.ಡಿ.), ಹಣಕಾಸು ಗುಪ್ತಚರ ಘಟಕ-ಭಾರತ(ಎಫ್‌ಐಯು-ಐಎನ್‌ಡಿ) ಮತ್ತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯಂತಹ ಹಣಕಾಸು ಸಂಸ್ಥೆಗಳನ್ನು ಸೇರಿಸಿಕೊಳ್ಳುವಂತೆಯೂ ಶಾ BPR&Dಗೆ ಸೂಚಿಸಿದ್ದಾರೆ.
ಹೆಚ್ಚುವರಿಯಾಗಿ, ಭಯೋತ್ಪಾದನೆಗೆ ಹಣಕಾಸು ನೆರವು ಜಾಲಗಳನ್ನು ನಿರ್ಮೂಲನ ಮಾಡಲು ಹಣಕಾಸು ಅಕ್ರಮಗಳ ವಿಶ್ಲೇಷಣೆಯ ಮೂಲಕ ಅಪರಿಚಿತ ಭಯೋತ್ಪಾದಕ ಜಾಲಗಳು,ಅವುಗಳ ಸಂಪರ್ಕಗಳು ಮತ್ತು ಉದ್ದೇಶಗಳನ್ನು ಗುರುತಿಸಲು ಎಸ್‌ಒಪಿಯನ್ನು ಸಿದ್ಧಗೊಳಿಸುವಂತೆ ಈ.ಡಿ.,ಎಫ್‌ಐಯು-ಐಎನ್‌ಡಿ ಮತ್ತು ಸಿಬಿಡಿಟಿಗಳಿಗೆ ಸೂಚಿಸಲಾಗಿದೆ.
ಕಾಲ್ತುಳಿತದಂತಹ ಘಟನೆಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳಲು ವಿವಿಧ ಧಾರ್ಮಿಕ ಸಮಾವೇಶಗಳ ಕುರಿತು ಅಧ್ಯಯನಕ್ಕಾಗಿ ರಾಜ್ಯಗಳ ಪೋಲಿಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಮತ್ತು ಅಂತಹ ಸಮಾವೇಶಗಳ ಮೇಲೆ ನಿಗಾ ಹಾಗೂ ನಿಯಂತ್ರಣಕ್ಕಾಗಿ ಎಸ್‌ಒಪಿಯೊಂದನ್ನು ರೂಪಿಸುವಂತೆಯೂ ಶಾ BPR&Dಗೆ ಸೂಚಿಸಿದ್ದಾರೆನ್ನಲಾಗಿದೆ.
ಮೂಲಗಳ ಪ್ರಕಾರ ಪಂಜಾಬಿನಲ್ಲಿ ಖಾಲಿಸ್ತಾನಿ ಉಗ್ರವಾದ ಮತ್ತು ಸಾಮಾನ್ಯ ಕ್ರಿಮಿನಲ್ ಚಟುವಟಿಕೆಗಳನ್ನು ಎದುರಿಸಲು ಪ್ರತ್ಯೇಕ ಕಾರ್ಯವಿಧಾನಗಳನ್ನು ರೂಪಿಸುವಂತೆ ಶಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಡಿಎ),ಗಡಿ ರಕ್ಷಣಾ ಪಡೆ(ಬಿಎಸ್‌ಎಫ್) ಮತ್ತು ಮಾದಕ ದ್ರವ್ಯ ನಿಯಂತ್ರಣ ಘಟಕ(ಎನ್‌ಸಿಬಿ)ಗಳಿಗೆ ಸೂಚಿಸಿದ್ದಾರೆ.




