ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ-2025ರ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ರಾಜಕೀಯ ಪಕ್ಷಗಳು ಸೋಮವಾರ ಸ್ವಾಗತಿಸಿವೆ.
ಮುಸ್ಲಿಮರ ಹಕ್ಕುಗಳನ್ನು 'ಉಲ್ಲಂಘಿಸುವ' ವಿವಾದಾತ್ಮಕ ಷರತ್ತುಗಳನ್ನು ತಡೆಹಿಡಿಯಲಾಗಿದೆ ಎಂದು ಪ್ರತಿಪಕ್ಷಗಳು ಹೇಳಿವೆ.
'ಸುಪ್ರೀಂ ಕೋರ್ಟ್ ಆದೇಶವು ಸಂವಿಧಾನದ ಮೌಲ್ಯಗಳಾದ ನ್ಯಾಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಸಂದ ಜಯ' ಎಂದು ಕಾಂಗ್ರೆಸ್ ಬಣ್ಣಿಸಿದೆ. 'ವಕ್ಫ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿಯಲಾಗಿದೆ' ಎಂದು ಬಿಜೆಪಿ ಪ್ರತಿಪಾದಿಸಿದೆ.
ಪ್ರಮುಖ ಕೆಲವು ಮುಸ್ಲಿಂ ಸಂಘಟನೆಗಳು ಕೂಡಾ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ಅಂತಿಮ ತೀರ್ಪು ಪ್ರಕಟವಾದ ನಂತರ ಈ ವಿಷಯದಲ್ಲಿ 'ಸಂಪೂರ್ಣ ನ್ಯಾಯ' ಪಡೆಯುವ ಭರವಸೆಯನ್ನು ವ್ಯಕ್ತಪಡಿಸಿವೆ.
'ಖಂಡಿತವಾಗಿಯೂ ಇದು ಸ್ವಾಗತಾರ್ಹ ಆದೇಶ. ವಕ್ಫ್ ಕಾಯ್ದೆಗೆ ಸರ್ಕಾರ ತಂದಿರುವ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಪೀಠ ಅಂಗೀಕರಿಸಿದ್ದು, ಅದರ ವಿರುದ್ಧದ ಅರ್ಜಿಗಳನ್ನು ತಿರಸ್ಕರಿಸಿದೆ. ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
'ವಕ್ಫ್ ಕಾಯ್ದೆ ಅಸಾಂವಿಧಾನಿಕ ಮತ್ತು ನಿರ್ದಿಷ್ಟ ಸಮುದಾಯವೊಂದನ್ನು 'ಗುರಿ' ಮಾಡಲು ರೂಪಿಸಲಾಗಿದೆ ಎಂಬ ಪಕ್ಷದ ನಿಲುವನ್ನು ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವು ಸಮರ್ಥಿಸುತ್ತದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.




