ವರದಿಯ ಪ್ರಕಾರ 2006 ಮತ್ತು 2023ರ ನಡುವೆ 19 ಕಾಮನ್‌ವೆಲ್ತ್ ದೇಶಗಳಲ್ಲಿ 213 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಶೇ.96ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗಿಲ್ಲ. ಅಲ್ಲದೆ 41 ಕಾಮನ್‌ವೆಲ್ತ್ ದೇಶಗಳು ಮಾನನಷ್ಟಕ್ಕೆ ಕ್ರಿಮಿನಲ್ ದಂಡನೆಗಳನ್ನು ಕಾಯ್ದುಕೊಂಡಿವೆ. 48 ದೇಶಗಳು ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಳಿಸಿಕೊಂಡಿವೆ ಮತ್ತು 37 ದೇಶಗಳಲ್ಲಿ ಧರ್ಮನಿಂದನೆಯಂತಹ ಕಾನೂನುಗಳು ಜಾರಿಯಲ್ಲಿವೆ.
20 ವರ್ಷಗಳಲ್ಲಿ 200ಕ್ಕೂ ಅಧಿಕ ಪತ್ರಕರ್ತರ ಹತ್ಯೆಗಳಿಗೆ ಕಾರಣರಾದವರನ್ನು ವಿಚಾರಣೆಗೆ ಒಳಪಡಿಸುವಲ್ಲಿ ಮತ್ತು ಶಿಕ್ಷಿಸುವಲ್ಲಿ ಕಾಮನ್‌ವೆಲ್ತ್ ದೇಶಗಳ ಸಂಪೂರ್ಣ ವೈಫಲ್ಯವು ನಾಚಿಕೆಗೇಡಿನ ವಿಷಯವಾಗಿದೆ. ಈ ನಿರ್ಭೀತಿಯ ಸಂಸ್ಕೃತಿಯನ್ನು ಅಳಿಸಿ ಹಾಕಬೇಕಿದೆ. ಸತ್ಯ ಹೇಳುವವರನ್ನು ಬೆದರಿಕೆಗಳು ಮತ್ತು ಪ್ರತೀಕಾರಗಳಿಂದ ರಕ್ಷಿಸಲು ಪ್ರಾಮಾಣಿಕ ಕಾಮನ್‌ವೆಲ್ತ್ ಪ್ರಯತ್ನಗಳು ಸತ್ಯದ ಪರಿಕಲ್ಪನೆಯು ಭೀಷಣ ದಾಳಿಗೆ ಒಳಗಾಗುತ್ತಿರುವ ಸಮಯದಲ್ಲಿ ಸಂಸ್ಥೆಗೆ ಒಂದು ನೂತನ ಉದ್ದೇಶವನ್ನು ನೀಡುತ್ತದೆ ಎಂದು ಸಿಜೆಎದ ವಿಲಿಯಂ ಹಾರ್ಸ್ಲಿ ವರದಿಯಲ್ಲಿ ಹೇಳಿದ್ದಾರೆ.
'ನಿರೂಪಣೆಯನ್ನು ಯಾರು ನಿಯಂತ್ರಿಸುತ್ತಾರೆ? ಕಾಮನ್‌ವೆಲ್ತ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಾನೂನು ನಿರ್ಬಂಧಗಳು' ಶೀರ್ಷಿಕೆಯ ವರದಿಯು, ಮಾನನಷ್ಟ ಮತ್ತು ದೇಶದ್ರೋಹ ಸೇರಿದಂತೆ ಭಾಷಣ ಅಪರಾಧಗಳು ಹಾಗೂ ರಾಷ್ಟ್ರೀಯ ಭದ್ರತಾ ಕಾನೂನುಗಳ ಉಲ್ಲಂಘನೆಗಳಿಗಾಗಿ ಕ್ರಿಮಿನಲ್ ನಿಬಂಧನೆಗಳನ್ನು ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸರಕಾರದ ಟೀಕಾಕಾರರನ್ನು ಬೆದರಿಸಲು ಮತ್ತು ಮೌನವಾಗಿಸಲು ನಿರಂಕುಶವಾಗಿ ಬಳಸಲಾಗುತ್ತಿದೆ ಎಂದು ಹೇಳಿದೆ.
ವರದಿಯು ರಾಷ್ಟ್ರೀಯ ಕಾನೂನು ಚೌಕಟ್ಟುಗಳ ನಿಕಟ ವಿಶ್ಲೇಷಣೆಯನ್ನು ಆಧರಿಸಿದೆ ಮತ್ತು ಆಫ್ರಿಕಾ, ಏಷ್ಯಾ, ಅಮೆರಿಕಾ ಖಂಡಗಳು ಮತ್ತು ಕೆರಿಬಿಯನ್, ಯುರೋಪ್ ಮತ್ತು ಪ್ಯಾಸಿಫಿಕ್ ಪ್ರದೇಶಗಳಾಂತ್ಯದ 30ಕ್ಕೂ ಅಧಿಕ ವಕೀಲರು ಮತ್ತು 35 ವಕೀಲರ ಸಾಕ್ಷ್ಯಗಳನ್ನು ಉಲ್ಲೇಖಿಸಿದೆ.
ಕಾಮನ್‌ವೆಲ್ತ್‌ನ ಹಿಂದಿನ ನಿಷ್ಕ್ರಿಯತೆಯು ಕೆಲವು ಸದಸ್ಯ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ಆಡಳಿತದ ರಕ್ಷಣೆಗೆ ಗಂಭೀರ ಮತ್ತು ನಿರಂತರ ಸವಾಲುಗಳಿಗೆ ಕಾರಣವಾಗಿದೆ ಎಂದು ವರದಿಯು ತೀರ್ಮಾನಿಸಿದೆ.
ವರದಿಯ ಹಿಂದಿರುವ ಕಾಮನ್‌ವೆಲ್ತ್ ಮಾನ್ಯತೆ ಪಡೆದಿರುವ ಮೂರು ಸಂಘಟನೆಗಳು ಕಾನೂನುಬದ್ಧ ಸಾರ್ವಜನಿಕ ಭಾಷಣವನ್ನು ಅಪರಾಧೀಕರಿಸುವ ಕಾನೂನುಗಳನ್ನು ತುರ್ತಾಗಿ ರದ್ದುಗೊಳಿಸುವಂತೆ ಸದಸ್ಯ ದೇಶಗಳಿಗೆ ಕರೆ ನೀಡಿವೆ. ಹಿಂಸೆ ಮತ್ತು ಬೆದರಿಕೆಯ ವಿರುದ್ಧ ಸಾರ್ವಜನಿಕ ಕಾವಲು ನಾಯಿಗಳ ಪಾತ್ರವನ್ನು ನಿರ್ವಹಿಸುತ್ತಿರುವ ಪತ್ರಕರ್ತರು ಮತ್ತು ಇತರರನ್ನು ರಕ್ಷಿಸಲು ನಿರ್ಣಾಯಕ ಕ್ರಮಕ್ಕಾಗಿಯೂ ಅವು ಆಗ್ರಹಿಸಿವೆ.




