HEALTH TIPS

ಸೇನೆ ಸೇರುವ ರಷ್ಯಾ ಪ್ರಸ್ತಾವಕ್ಕೆ ಕಿವಿಗೊಡಬೇಡಿ: ಭಾರತೀಯರಿಗೆ MEA ಎಚ್ಚರಿಕೆ

ನವದೆಹಲಿ: ಹಲವು ಭಾರತೀಯರು ರಷ್ಯಾ ಸೇನೆಯನ್ನು ಸೇರಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯ, 'ಭಾರತೀಯ ನಾಗರಿಕರು ಯಾವುದೇ ಕಾರಣಕ್ಕೂ ರಷ್ಯಾ ಸೇನೆಗೆ ಸೇರುವ ಯಾವುದೇ ರೀತಿಯ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಡಿ' ಎಂದು ಎಚ್ಚರಿಸಿದೆ.

ಈ ಕುರಿತು ಭಾರತ ಹೊರಡಿಸಿರುವ ಪ್ರಕಟಣೆಯನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹಂಚಿಕೊಂಡಿದ್ದು, 'ರಷ್ಯಾ ಸೇನೆಗೆ ಭಾರತೀಯ ನಾಗರಿಕರನ್ನು ನೇಮಕ ಮಾಡಿರುವ ವರದಿಯನ್ನು ಗಮನಿಸಿದ್ದೇವೆ. ಕಳೆದ ಒಂದು ವರ್ಷದಲ್ಲಿ ಸರ್ಕಾರವು ಇದರಿಂದಾಗುವ ಅಪಾಯಗಳ ಬಗ್ಗೆ ತಿಳಿಸಿದೆ. ಭಾರತೀಯ ನಾಗರಿಕರಿಗೆ ಅದಕ್ಕೆ ಅನುಗುಣವಾಗಿ ಎಚ್ಚರಿಕೆಯನ್ನೂ ನೀಡಿದೆ. ಈಗ ವರದಿಯಾಗಿರುವ ವಿಚಾರವನ್ನು ದೆಹಲಿ ಮತ್ತು ಮಾಸ್ಕೊದಲ್ಲಿರುವ ರಷ್ಯಾದ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಭಾರತೀಯರನ್ನು ಸೇನೆಗೆ ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ಕೊನೆಗೊಳಿಸಬೇಕು ಮತ್ತು ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡಬೇಕು' ಎಂದು ತಿಳಿಸಿದೆ.

'ತೊಂದರೆಗೊಳಗಾದ ಭಾರತದ ನಾಗರಿಕರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ರಷ್ಯಾದ ಸೈನ್ಯಕ್ಕೆ ಸೇರಲು ನೀಡುವ ಯಾವುದೇ ಪ್ರಸ್ತಾವದಿಂದ ದೂರವಿರಿ ಎಂದು ಮತ್ತೊಮ್ಮೆ ಎಲ್ಲಾ ಭಾರತೀಯ ಪ್ರಜೆಗಳನ್ನು ಒತ್ತಾಯಿಸುತ್ತೇವೆ. ಏಕೆಂದರೆ ಇದು ತೀರಾ ಅಪಾಯಕಾರಿಯಾಗಿದೆ' ಎಂದು ಸಚಿವಾಲಯ ಹೇಳಿದೆ.

ಆರು ತಿಂಗಳ ಹಿಂದೆ ರಷ್ಯಾಕ್ಕೆ ಪ್ರಯಾಣಿಸಿದ್ದ ಇಬ್ಬರು ಭಾರತೀಯರಿಗೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಕೊಡಿಸುವುದಾಗಿ ಏಜೆಂಟ್‌ ಒಬ್ಬರು ನಂಬಿಸಿ ಯುದ್ಧಭೂಮಿಗೆ ಕರೆದೊಯ್ದಿದ್ದಾರೆ ಎಂಬ ವರದಿಯನ್ನು ಆಧರಿಸಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries