HEALTH TIPS

2024-25ರಲ್ಲಿ 69 ಲಕ್ಷ ಪ್ರವಾಸಿಗಳನ್ನು ಸೆಳೆದ ತಾಜ್‌ ಮಹಲ್!

ನವದೆಹಲಿ: ಆಗ್ರಾದಲ್ಲಿರುವ ಶ್ವೇತ ಅಮೃತ ಶಿಲೆಯ ಅದ್ಭುತ ತಾಜ್‌ ಮಹಲ್ 2024-25ನೇ ಸಾಲಿನಲ್ಲಿ ಆರು ಲಕ್ಷ ವಿದೇಶಿಯರು ಸೇರಿದಂತೆ 69 ಲಕ್ಷ ಪ್ರವಾಸಿಗಳನ್ನು ಸೆಳೆದಿದ್ದು, ದೇಶದಲ್ಲಿ ಅತ್ಯಂತ ಹೆಚ್ಚಿನ ಜನರು ಭೇಟಿ ನೀಡುವ ಸ್ಮಾರಕವಾಗಿ ಮತ್ತೊಮ್ಮೆ ಮೂಡಿ ಬಂದಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣೆ(ಎಎಸ್‌ಐ)ಯ ಅಧೀನದಲ್ಲಿರುವ, ಪ್ರವೇಶ ಶುಲ್ಕವನ್ನು ಹೊಂದಿರುವ 145 ಸ್ಮಾರಕಗಳಿಗೆ ಭೇಟಿ ನೀಡಿದ್ದ ಒಟ್ಟು ಪ್ರವಾಸಿಗಳ ಪೈಕಿ ಸುಮಾರು ಶೇ.12ರಷ್ಟು ಜನರು ತಾಜ್‌ಮಹಲ್‌ನ್ನು ಸಂದರ್ಶಿಸಿದ್ದರು.

ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ,17ನೇ ಶತಮಾನದ ಮುಘಲ್ ಚಕ್ರವರ್ತಿ ಶಾಹಜಹಾನ್ ಮತ್ತು ಅವರ ಪತ್ನಿ ಮುಮ್ತಾಜ್ ಮಹಲ್ ಅವರ ಈ ಸಮಾಧಿಯು ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಮತ್ತು ಅತ್ಯಂತ ಹೆಚ್ಚು ಜನರು ಭೇಟಿ ನೀಡುತ್ತಿರುವ ಸ್ಮಾರಕವಾಗಿದೆ.

ಪ್ರವಾಸೋದ್ಯಮ ಸಚಿವಾಲಯವು ಇತ್ತೀಚಿಗೆ ಬಿಡುಗಡೆ ಮಾಡಿರುವ ಭಾರತೀಯ ಪ್ರವಾಸೋದ್ಯಮ ದತ್ತಾಂಶಗಳ ಪ್ರಕಾರ ದೇಶಿಯ ಪ್ರವಾಸಿಗಳಲ್ಲಿ ಜನಪ್ರಿಯವಾಗಿರುವ ಇತರ ತಾಣಗಳಲ್ಲಿ ಕೋನಾರ್ಕ್‌ನಲ್ಲಿಯ 13ನೇ ಶತಮಾನದ ಸೂರ್ಯ ದೇವಾಲಯ(35.7 ಲ.) ಮತ್ತು ದಿಲ್ಲಿಯ 12-13ನೇ ಶತಮಾನದ ಕುತುಬ್ ಮಿನಾರ್(32 ಲ.) ಸೇರಿವೆ.

2024-25ರಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದೇಶಿಯ ಪ್ರವಾಸಿಗಳು ಭೇಟಿ ನೀಡಿದ್ದ ತಾಣಗಳಲ್ಲಿ ದಿಲ್ಲಿಯ ಕೆಂಪುಕೋಟೆ(28.84 ಲ.), ಔರಂಗಾಬಾದ್‌ನ ರಾಬಿಯಾ ದುರಾನಿ ಗೋರಿ(ಬೀಬಿ ಕಾ ಮಕ್ಬರಾ, (20.04 ಲ.) ಮತ್ತು ಎಲ್ಲೋರಾ ಗುಹೆಗಳು(17.39 ಲ.), ಹೈದರಾಬಾದ್‌ನ ಗೋಲ್ಕೊಂಡಾ ಕೋಟೆ(15.63 ಲ.), ಆಗ್ರಾ ಕೋಟೆ(15.45 ಲ.). ಗೋವಾದ ಅಪ್ಪರ್ ಫೋರ್ಟ್ ಅಗ್ವಾಡಾ(13.58 ಲ.) ಮತ್ತು ಹೈದರಾಬಾದ್‌ನ ಚಾರ್‌ಮಿನಾರ್(13.43 ಲ.) ಸೇರಿವೆ.

ದಿಲ್ಲಿಯ ಹುಮಾಯೂನ್ ಗೋರಿ(1.58 ಲ.), ರಾಜಸ್ಥಾನದ ಅಭಾನೇರಿಯ ಚಾಂದ್ ಬಾವಡಿ(1.16 ಲ.), ಫತೇಪುರ ಸಿಕ್ರಿ(97,000), ಆಗ್ರಾದ ಇತಿಮಾದ್-ಉದ್-ದೌಲಾ(90,367), ನಳಂದಾ ಉತ್ಖನನ ತಾಣ(88,151), ದಿಲ್ಲಿಯ ಕೆಂಪುಕೋಟೆ(79,311), ಉ.ಪ್ರದೇಶದ ಶ್ರಾವಸ್ತಿಯ ಪ್ರಾಚೀನ ಬೌದ್ಧ ತಾಣ ಸಹೇತ್-ಮಹೇತ್(73,312) ವಿದೇಶಿ ಪ್ರವಾಸಿಗಳು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಾಗಿವೆ.

ಪ್ರವೇಶ ಶುಲ್ಕವನ್ನು ಹೊಂದಿರುವ ಇತರ ಸ್ಮಾರಕಗಳಿಗೆ ಕಳೆದ ವರ್ಷ 6.21 ಲಕ್ಷ ವಿದೇಶಿಯರು ಸೇರಿದಂತೆ 2.93 ಕೋ.ಪ್ರವಾಸಿಗಳು ಭೇಟಿ ನೀಡಿದ್ದರು. ಒಟ್ಟಾರೆಯಾಗಿ ಎಎಸ್‌ಐ ತಾಣಗಳಿಗೆ 24.15 ಲಕ್ಷ ವಿದೇಶಿಯರು ಸೇರಿದಂತೆ 5.66 ಪ್ರವಾಸಿಗಳು ಭೇಟಿ ನೀಡಿದ್ದರು.

ಎಎಸ್‌ಐ ಮಹಾ ನಿರ್ದೇಶಕರ ಕಚೇರಿಯು ಭಾರತೀಯ ಮತ್ತು ವಿದೇಶಿ ಪ್ರವಾಸಿಗಳಿಗೆ ಮಾರಾಟ ಮಾಡಿದ ಪ್ರವೇಶ ಟಿಕೆಟ್‌ಗಳ ಆಧಾರದಲ್ಲಿ ಸ್ಮಾರಕಗಳಿಗೆ ಭೇಟಿ ನೀಡಿದವರ ಸಂಖ್ಯೆ ಕುರಿತು ಅಂಕಿಅಂಶಗಳನ್ನು ನಿರ್ವಹಿಸುತ್ತದೆ.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,697 ಪ್ರಾಚೀನ ಸ್ಮಾರಕಗಳು, ಪುರಾತತ್ವ ತಾಣಗಳು ಮತ್ತು ಅವಶೇಷಗಳು ಎಎಸ್‌ಐ ಅಧೀನದಲ್ಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries