ಸೂರತ್: ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಮೊದಲ ಹಂತದಲ್ಲಿ ಗುಜರಾತಿನ ಸೂರತ್ ಮತ್ತು ಬಿಲಿಮೋರಿಯಾ ನಡುವಿನ 50 ಕಿ.ಮೀ.ಉದ್ದದ ವಿಭಾಗದಲ್ಲಿ 2027ರಲ್ಲಿ ಬುಲೆಟ್ ರೈಲು ಸಂಚಾರವನ್ನು ಆರಂಭಿಸಿಲಿದೆ ಮತ್ತು 2029ರ ವೇಳೆಗೆ ಮುಂಬೈ ಮತ್ತು ಅಹ್ಮದಾಬಾದ್ ನಡುವಿನ ಸಂಪೂರ್ಣ ವಿಭಾಗವು ಕಾರ್ಯಾರಂಭಗೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಶನಿವಾರ ಇಲ್ಲಿ ತಿಳಿಸಿದರು.
ಕಾರ್ಯಾರಂಭಗೊಂಡ ಬಳಿಕ ಬುಲೆಟ್ ರೈಲು ಮುಂಬೈ ಮತ್ತು ಅಹ್ಮದಾಬಾದ್ ನಡುವಿನ ದೂರವನ್ನು ಕೇವಲ ಎರಡು ಗಂಟೆ ಏಳು ನಿಮಿಷಗಳಲ್ಲಿ ಕ್ರಮಿಸಲಿದೆ ಎಂದ ಅವರು, ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಪ್ರಗತಿ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಇಲ್ಲಿ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಅವರು ಹಳಿ ಸ್ಥಾಪನೆ ಕಾಮಗಾರಿಯನ್ನು ಪರಿಶೀಲಿಸಿದರು.
ಮೊದಲ ಬುಲೆಟ್ ರೈಲು ಯೋಜನೆಯ ಒಟ್ಟಾರೆ ಪ್ರಗತಿಯು ಉತ್ತಮವಾಗಿದೆ. ಸೂರತ್ ಮತ್ತು ಬಿಲಿಮೋರಿಯಾ ನಡುವೆ 2027ರಲ್ಲಿ ಮತ್ತು 2028ರಲ್ಲಿ ಥಾಣೆ-ಅಹ್ಮದಾಬಾದ್ ನಡುವೆ ಬುಲೆಟ್ ರೈಲು ಸಂಚಾರವನ್ನು ಆರಂಭಿಸಲಿದೆ. 2029ರ ವೇಳೆಗೆ ಇಡೀ ಮುಂಬೈ-ಅಹ್ಮದಾಬಾದ್ ವಿಭಾಗವು ಕಾರ್ಯಾರಂಭಗೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯ ಮಾರ್ಗದ ವೇಗದ ಸಾಮರ್ಥ್ಯ ಪ್ರತಿ ಗಂಟೆಗೆ 320 ಕಿ.ಮೀ. ಮತ್ತು ಲೂಪ್ ಲೈನ್‌ನಲ್ಲಿ 80 ಕಿ.ಮೀ.ಇರಲಿದೆ ಎಂದರು.
ರೈಲುಗಳ ಸುರಕ್ಷಿತ ಮತ್ತು ದಕ್ಷ ಸಂಚಾರಕ್ಕಾಗಿ ಅತ್ಯಂತ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ಹಳಿಗಳಲ್ಲಿಯೂ ಸಹ ಯಾವುದೇ ಕಂಪನವನ್ನು ಹೀರಿಕೊಳ್ಳಲು ಹಲವಾರು ಕಾರ್ಯವಿಧಾನಗಳನ್ನು ಅಳವಡಿಸಲಾಗಿದೆ ಎಂದರು.
ಹಳಿಗಳು ವಿಶೇಷ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು,ಭಾರೀ ಬಿರುಗಾಳಿ ಬೀಸಿದರೂ ಅಥವಾ ಹಠಾತ್ ಭೂಕಂಪ ಸಂಭವಿಸಿದರೂ ರೈಲು ಅತ್ಯಂತ ಸ್ಥಿರವಾಗಿರುತ್ತದೆ ಎಂದು ವೈಷ್ಣವ ವಿವರಿಸಿದರು.




