ಶುಕ್ರವಾರ ಇಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, ಕುಟುಂಬಗಳ ಇತ್ತೀಚಿನ ಮಾಹಿತಿಯಂತೆ, ಇನ್ನೂ ಹಲವಾರು ಭಾರತೀಯರು ರಶ್ಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದು ಹೇಳಿದರು.
"ನಮಗಿರುವ ಮಾಹಿತಿಯ ಪ್ರಕಾರ, ಸದ್ಯ 27 ಭಾರತೀಯರು ರಶ್ಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಈ ವಿಷಯದ ಕುರಿತು ನಾವು ಅವರ ಕುಟುಂಬದ ಸದಸ್ಯರ ನಿಕಟ ಸಂಪರ್ಕದಲ್ಲಿದ್ದೇವೆ" ಎಂದು ಅವರು ತಿಳಿಸಿದರು.
"ರಶ್ಯ ಸೇನೆಗೆ ಸೇರ್ಪಡೆಯಾಗುವುದು ಜೀವಾಪಾಯವನ್ನು ಹೊಂದಿರುವುದರಿಂದ, ರಶ್ಯ ಸೇನೆಗೆ ಸೇರ್ಪಡೆಯಾಗುವುದರಿಂದ ದೂರ ಉಳಿಯಬೇಕು ಎಂದು ನಾವು ಮತ್ತೊಮ್ಮೆ ಎಲ್ಲ ಭಾರತೀಯ ಪ್ರಜೆಗಳಿಗೂ ಮನವಿ ಮಾಡುತ್ತೇವೆ" ಎಂದೂ ಅವರು ಹೇಳಿದರು.
ರಶ್ಯ ಪ್ರಾಧಿಕಾರಗಳೊಂದಿಗೆ ನಾವು ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
"ನಾವು ಈ ವಿಷಯವನ್ನು ಮಾಸ್ಕೊದಲ್ಲಿನ ರಶ್ಯ ಪ್ರಾಧಿಕಾರಗಳು ಹಾಗೂ ಹೊಸದಿಲ್ಲಿಯ ರಶ್ಯ ರಾಯಭಾರಿಗಳ ಬಳಿ ಬಲವಾಗಿ ಪ್ರಸ್ತಾಪಿಸಿದ್ದೇವೆ ಹಾಗೂ ಎಷ್ಟು ಶೀಘ್ರ ಸಾಧ್ಯವೊ ಅಷ್ಟು ಶೀಘ್ರ ಅವರನ್ನೆಲ್ಲ ಬಿಡುಗಡೆ ಮಾಡುವಂತೆ ಕೋರಿದ್ದೇವೆ" ಎಂದು ಅವರು ತಿಳಿಸಿದರು.
ಕಳೆದ ವರ್ಷ ರಶ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡಾ ಈ ವಿಷಯವನ್ನು ಪ್ರಸ್ತಾಪಿಸಿದ್ದರು.




