ಚಂಡಿಗಢ: ಬಬ್ಬರ್ ಖಾಲ್ಸಾದ ಭಯೋತ್ಪಾದಕ ಪರ್ಮಿಂದರ್ ಸಿಂಗ್ ಆಲಿಯಾಸ್ ಪಿಂಡಿಯನ್ನು ಯುಎಇಯ ಅಬುದಾಬಿಯಿಂದ ಭಾರತಕ್ಕೆ ಗಡಿಪಾರು ಮಾಡಿದೆ.
ಪಂಜಾಬ್ ಪೊಲೀಸರ ಮನವಿಯ ಹಿನ್ನೆಲೆಯಲ್ಲಿ ಇಂಟರ್‌ಪೋಲ್ ಆತನ ವಿರುದ್ಧ 2025 ಜೂನ್ 13ರಂದು ರೆಡ್ ಕಾರ್ನರ್ ನೋಟಿಸು ಜಾರಿಗೊಳಿಸಿತ್ತು.
ಅನಂತರ ಆತನನ್ನು ಯುಎಇಯಿಂದ ಬಂಧಿಸಲಾಗಿತ್ತು ಹಾಗೂ ಸೆಪ್ಟಂಬರ್ 26ರಂದು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
ಸಿಬಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹಾಗೂ ಇತರ ಕೇಂದ್ರೀಯ ಸಂಸ್ಥೆಗಳ ಸಮನ್ವಯದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಬಾಟಾಲದ ಹರ್ಷ ಗ್ರಾಮದ ನಿವಾಸಿಯಾಗಿರುವ ಪರ್ಮಿಂದರ್ ಸಿಂಗ್ ಕ್ರಿಮಿನಲ್ ಮಾತ್ರ ಅಲ್ಲ, ಬದಲಾಗಿ ಅಪಾಯಕಾರಿ ಭಯೋತ್ಪಾದಕ-ಕ್ರಿಮಿನಲ್ ಜಾಲದ ಪ್ರಮುಖ ಕಾರ್ಯಕರ್ತ. ಬಾಟಾಲಾ ಪೊಲೀಸ್‌ನ ತಂಡ ಆತನನ್ನು ಭಾರತಕ್ಕೆ ಕರೆದುಕೊಂಡು ಬಂದಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಶನಿವಾರ ತಿಳಿಸಿದ್ದಾರೆ.
ಯಾದವ್ ಪ್ರಕಾರ ಪಿಂಡಿ ಅಂತಾರಾಷ್ಟ್ರೀಯ ನಿಯೋಜಿತ ಭಯೋತ್ಪಾದಕರಾದ ಹರ್ವಿಂದರ್ ಸಿಂಗ್ ಆಲಿಯಾಸ್ ರಿಂಡಾ ಹಾಗೂ ಹ್ಯಾಪಿ ಪಾಸಿಯಾ ಅವರ ನಿಕಟ ಸಹವರ್ತಿ. ಪಿಂಡಿ ಬಾಟಾಲಾ-ಗುರುದ್ವಾರ ವಲಯದಲ್ಲಿ ಪೆಟ್ರೋಲ್ ಬಾಂಬ್ ದಾಳಿ, ಹಿಂಸಾತ್ಮಕ ಹಲ್ಲೆ ಹಾಗೂ ಸುಲಿಗೆ ಚಟುವಟಿಕೆಗಳು ಸೇರಿದಂತೆ ಹಲವು ಹೇಯ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಅಪರಾಧ ಸಂಘಟಿಸಲು ಹಾಗೂ ತನ್ನ ಕಾರ್ಯಾಚರಣೆಗೆ ಹಣ ಒದಗಿಸಲು ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.




