ಹಾಂಗ್‌ಝೂ: ಚೀನಾದ ಹಾಂಗ್‌ಝೂನಲ್ಲಿ ನಡೆಯುತ್ತಿರುವ ಮಹಿಳೆಯರ ಏಶ್ಯ ಕಪ್ 2025 ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ಭಾರತವು ಹಾಲಿ ಚಾಂಪಿಯನ್ ಜಪಾನನ್ನು 2-2ರ ಡ್ರಾದಲ್ಲಿ ಹಿಡಿದಿಟ್ಟಿದೆ.
ತನ್ನ ಬಣದ ಎರಡನೇ ಪಂದ್ಯದಲ್ಲಿ ಭಾರತದ ಪರವಾಗಿ ನವನೀತ್ ಕೌರ್ ಕೊನೆಯ ಕ್ಷಣಗಳಲ್ಲಿ ಪೆನಾಲ್ಟಿ ಕಾರ್ನರ್ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು.
ಇದರೊಂದಿಗೆ ಭಾರತವು ಒಂದು ಅಂಕವನ್ನು ಗಳಿಸಿದೆ.
ಮೊದಲ ಮುನ್ನಡೆಯನ್ನು ಜಪಾನ್ ಪಡೆಯಿತು. ಪಂದ್ಯದ 10ನೇ ನಿಮಿಷದಲ್ಲಿ ಹಿರೋಕ ಮುರಯಮ ಗೋಲು ಬಾರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಭಾರತ 30ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂಕಪಟ್ಟಿಯನ್ನು ಸಮಬಲಗೊಳಿಸಿತು. ಭಾರತದ ಋತಜ ದಾದಾಸೊ ಪಿಸಲ್ ಗೋಲು ಬಾರಿಸಿದಾಗ ಅಂಕವು 1-1ರಲ್ಲಿ ಸಮಬಲಗೊಂಡಿತು.
ದ್ವಿತೀಯಾರ್ಧದಲ್ಲಿ, 58ನೇ ನಿಮಿಷದಲ್ಲಿ ಗೋಲು ಬಾರಿಸಿದ ಚಿಕೊ ಫುಜಿಬಯಶಿ ಮತ್ತೊಮ್ಮೆ ಜಪಾನ್ ಗೆ ಮುನ್ನಡೆ ಒದಗಿಸಿದರು. ಆದರೆ, ಕೊನೆಯ ಕ್ಷಣಗಳಲ್ಲಿ ನವನೀತ್ ಕೌರ್ ಬಾರಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು.
ಭಾರತ ತನ್ನ ಬಿ ಬಣದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಸೋಮವಾರ ಸಿಂಗಾಪುರವನ್ನು ಎದುರಿಸಲಿದೆ. ಅದು ಮೊದಲ ಪಂದ್ಯದಲ್ಲಿ ಥಾಯ್ಲೆಂಡನ್ನು 11-0 ಗೋಲುಗಳಿಂದ ಸೋಲಿಸಿತ್ತು.
ಜಪಾನ್ ತನ್ನ ಮೊದಲ ಪಂದ್ಯದಲ್ಲಿ ಸಿಂಗಾಪುರವನ್ನು 9-0 ಗೋಲುಗಳಿಂದ ಮಣಿಸಿತ್ತು.

