ನವದೆಹಲಿ: ಭಾರತ-ಅಮೆರಿಕ ಸಂಬಂಧ ಸುಧಾರಣೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಸಕಾರಾತ್ಮಕ ನಡೆ ಪ್ರಶಂಸನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
"ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಬಾಂಧವ್ಯವಿದೆ. ಮೋದಿ ಹಾಗೂ ನನ್ನ ನಡುವೆ ಉತ್ತಮ ಸ್ನೇಹ ಸಂಬಂಧವಿದೆ.
ಸ್ವಲ್ಪ ಕಾಯಿರಿ" ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಿಗೇ, ಮೋದಿ ತಮ್ಮ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
"ಡೊನಾಲ್ಡ್ ಟ್ರಂಪ್ ರ ಭಾವನೆಗಳನ್ನು ಹಾಗೂ ನಮ್ಮ ಸಂಬಂಧಗಳ ಕುರಿತು ಅವರು ಸಕಾರಾತ್ಮಕ ಮೌಲ್ಯಮಾಪನ ಮಾಡಿರುವುದನ್ನು ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ" ಎಂದು ಮೋದಿ ಬರೆದುಕೊಂಡಿದ್ದಾರೆ.
"ಸಮಗ್ರ ಹಾಗೂ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಭಾರತ ಮತ್ತು ಅಮೆರಿಕ ಸಕಾರಾತ್ಮಕವಾಗಿ ಎದುರು ನೋಡುತ್ತಿವೆ" ಎಂದೂ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಶುಕ್ರವಾರ ತಮ್ಮ ಓವಲ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, "ನಾನು ನರೇಂದ್ರ ಮೋದಿಯೊಂದಿಗೆ ಎಂದಿಗೂ ಸ್ನೇಹಿತನಾಗಿರುತ್ತೇನೆ. ಅವರೊಬ್ಬ ಅದ್ಭುತ ಪ್ರಧಾನಿಯಾಗಿದ್ದಾರೆ. ಆದರೆ, ಅವರೀಗ ಮಾಡುತ್ತಿರುವುದು ನನಗೆ ಸರಿ ಕಾಣುತ್ತಿಲ್ಲ. ಹೀಗಿದ್ದೂ, ಅಮೆರಿಕ ಮತ್ತು ಭಾರತದ ನಡುವೆ ವಿಶೇಷ ಬಾಂಧವ್ಯವಿದೆ. ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳರಬೇಕಿಲ್ಲ. ಸ್ವಲ್ಪ ಸಮಯ ಕಾಯಿರಿ" ಎಂದು ಹೇಳಿದ್ದರು.

