ಪಾಟ್ನಾ: ಅಮೃತಸರ ದೇಗುಲದ ಮೇಲಿನ ದಾಳಿಯಲ್ಲಿ ಭಾಗಿಯಾದ ಆರೋಪದಲ್ಲಿ ಶಂಕಿತ ಖಾಲಿಸ್ತಾನಿ ಉಗ್ರನೋರ್ವನನ್ನು ಗಯಾ ಜಿಲ್ಲೆಯಿಂದ ಎನ್‌ಐಎ ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಂಧಿತ ಉಗ್ರನನ್ನು ಶರಣ್‌ಜಿತ್ ಕುಮಾರ್ ಆಲಿಯಾಸ್ ಸನ್ನಿ ಎಂದು ಗುರುತಿಸಲಾಗಿದೆ.
ಈತ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿರುವ ದೇಗುಲದ ಮೇಲೆ ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.
ಖಚಿತ ಮಾಹಿತಿ ಆಧಾರದಲ್ಲಿ ಎನ್‌ಐಎ ತಂಡ ಗಯಾ ಜಿಲ್ಲೆಯ ಶೇರ್‌ಘಾಟಿ ಪೊಲೀಸ್‌ನ ನೆರವಿನೊಂದಿಗೆ ಗೋಪಾಲಪುರ ಗ್ರಾಮದ ಸಮೀಪದ ರಸ್ತೆ ಬದಿಯ ಧಾಬಾದ ಮೇಲೆ ದಾಳಿ ನಡೆಸಿತು. ಅಲ್ಲದೆ, ಪಂಜಾಬ್ ನ ಗುರುದಾಸ್‌ಪುರ ಜಿಲ್ಲೆಯ ಬಾಟ್ಲಾ ಸಮೀಪದ ಭೈನಿ ಬಂಗಾರ್ ಕದಿಯಾನ್ ಗ್ರಾಮದ ನಿವಾಸಿ ಎಂದು ಹೇಳಲಾದ ಶರಣಜಿತ್ ಕುಮಾರ್‌ನನ್ನು ಶುಕ್ರವಾರ ಬಂಧಿಸಿತು.
ಶಂಕಿತ ಖಾಲಿಸ್ಥಾನಿ ಉಗ್ರನ ಬಂಧನವನ್ನು ಗಯಾದ ಶೇರ್‌ಘಾಟಿಯ ಹೆಚ್ಚುವರಿ ಪೊಲೀಸ್ ವರಿಷ್ಠ ಶೈಲೇಂದ್ರ ಸಿಂಗ್ ಅವರು ದೃಢಪಡಿಸಿದ್ದಾರೆ. ಪೊಲೀಸರಿಗೆ ಬೇಕಾಗಿದ್ದ ಉಗ್ರನನ್ನು ಬಂಧಿಸಲು ಎನ್‌ಐಎ ತಂಡಕ್ಕೆ ಶೇರ್‌ಘಾಟಿ ಪೊಲೀಸರು ಪೂರ್ಣ ಸಹಕಾರ ನೀಡಿದರು. ಪೊಲೀಸರು ಹಾಗೂ ಎನ್‌ಐಎಯನ್ನು ವಂಚಿಸಲು ಶರಣ್‌ಜಿತ್ ಕುಮಾರ್ ಟ್ರಕ್ ಚಾಲಕನಾಗಿ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.




