ಜಿಎಸ್‌ಟಿ 2.0 ಅನುಸರಣೆ ಸವಾಲುಗಳನ್ನು ಹಗುರವಾಗಿಸುತ್ತದೆ, ವಿವಾದಗಳನ್ನು ಕಡಿಮೆಗೊಳಿಸುತ್ತದೆ ಹಾಗೂ ಕುಟುಂಬಗಳಿಗೆ ಸರಕುಗಳು ಮತ್ತು ಸೇವೆಗಳನ್ನು ಅಗ್ಗವಾಗಿಸುತ್ತದೆ ಎಂದು ಸರಕಾರವು ನಿರೀಕ್ಷಿಸಿದೆ. ಆದಾಗ್ಯೂ ಹಿಂದಿನ ಅನುಭವವು ಮಿಶ್ರ ಫಲಿತಾಂಶಗಳನ್ನು ತೋರಿಸಿರುವುದರಿಂದ ಕಂಪನಿಗಳು ತೆರಿಗೆ ಕಡಿತದ ಲಾಭವನ್ನು ತಮಗೆ ವರ್ಗಾಯಿಸುತ್ತವೆಯೇ ಎನ್ನುವುದು ಗ್ರಾಹಕರಿಗೆ ನಿಜವಾದ ಪ್ರಶ್ನೆಯಾಗಿದೆ.
ಹಿಂದಿನ ನಾಲ್ಕು ಹಂತಗಳ ಶೇ.5,ಶೇ.12,ಶೇ.18 ಮತ್ತು ಶೇ.28ರ ತೆರಿಗೆ ಸ್ವರೂಪವು ಗೊಂದಲವನ್ನು,ವಿಶೇಷವಾಗಿ ಸರಕುಗಳ ವರ್ಗೀಕರಣದಲ್ಲಿ ಸೃಷ್ಟಿಸಿತ್ತು. ಜಿಎಸ್‌ಟಿ 2.0 ಇದನ್ನು ಎರಡು ವಿಶಾಲ ಸ್ಲ್ಯಾಬ್‌ಗಳಿಗೆ ಸರಳಗೊಳಿಸಿದೆ:
ಆಹಾರ ಧಾನ್ಯಗಳು ,ಔಷಧಿಗಳು, ಪ್ರಾಥಮಿಕ ಡೇರಿ ಉತ್ಪನ್ನಗಳು ಮತ್ತು ಶೈಕ್ಷಣಿಕ ಉತ್ಪನ್ನಗಳಂತಹ ಅಗತ್ಯ ಮತ್ತು ದಿನಬಳಕೆಯ ವಸ್ತುಗಳಿಗೆ ಶೇ.5
ತಯಾರಿಕೆ, ಸಾರಿಗೆ ಮತ್ತು ಗ್ರಾಹಕ ಸೇವೆಗಳು ಸೇರಿದಂತೆ ಹೆಚ್ಚಿನ ಪ್ರಮಾಣಿತ ಸರಕುಗಳು ಮತ್ತು ಸೇವೆಗಳಿಗೆ ಶೇ.18
ತಂಬಾಕು, ಪಾನ್ ಮಸಾಲಾ, ಕಾರ್ಬನೀಕೃತ ಪಾನೀಯಗಳು, ಪ್ರೀಮಿಯಂ ವಾಹನಗಳು,ಜೂಜು,ಕ್ಯಾಸಿನೊಗಳು, ಆನ್‌ಲೈನ್ ಗೇಮಿಂಗ್ ಮತ್ತು ರೇಸ್‌ಕ್ಲಬ್‌ನಂತಹ ಪಾಪದ ಮತ್ತು ಐಷಾರಾಮಿ ವರ್ಗಕ್ಕೆ ಶೇ.40 ತೆರಿಗೆ ದರವು ಈಗ ಅನ್ವಯಿಸುತ್ತದೆ.
ಕೇಂದ್ರ ವಿತ್ತ ಸಚಿವಾಲಯವು ಕಳೆದ ವಾರ ಪರಿಷ್ಕೃತ ಕೇಂದ್ರ ಜಿಎಸ್‌ಟಿ(ಸಿಜಿಎಸ್‌ಟಿ) ದರಗಳನ್ನು ಪ್ರಕಟಿಸಿದ್ದು,ರಾಜ್ಯ ಸರಕಾರಗಳು ಇಂದಿನಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಜಿಎಸ್‌ಟಿ(ಎಸ್‌ಜಿಎಸ್‌ಟಿ) ಅಧಿಸೂಚನೆಗಳನ್ನು ಹೊರಡಿಸಿವೆ.
ಯಾವುದು ಅಗ್ಗ?
ಅನೇಕ ಅಗತ್ಯ ಮತ್ತು ಗ್ರಾಹಕ ಕೇಂದ್ರಿತ ವಸ್ತುಗಳು ಈಗ ಕಡಿಮೆ ತೆರಿಗೆಗಳನ್ನು ಹೊಂದಿವೆ.
►ಆಹಾರ ಮತ್ತು ಡೇರಿ ಉತ್ಪನ್ನಗಳು
ಶೂನ್ಯ ತೆರಿಗೆ: ಅಲ್ಟ್ರಾ ಪಾಶ್ಚೀಕರಿಸಿದ ಹಾಲು, ಚಪಾತಿ, ಪರಾಠಾ ಮತ್ತು ಪರೋಟಾ
ಶೇ.5 ತೆರಿಗೆ: ಬೆಣ್ಣೆ, ತುಪ್ಪ, ಪನೀರ್, ಚೀಸ್‌ನಂತಹ ಉತ್ಪನ್ನಗಳು, ಪಾಸ್ತಾ, ಬಿಸ್ಕತ್, ಚಾಕೊಲೇಟ್, ಕಾರ್ನ್‌ಫ್ಲೇಕ್ಸ್, ನಮ್ಕೀನ್ ಮತ್ತು ಭುಜಿಯಾದಂತಹ ಪ್ಯಾಕ್ ಮಾಡಲಾದ ಆಹಾರಗಳು
►ಒಣಹಣ್ಣುಗಳು ಮತ್ತು ಸಕ್ಕರೆ ಉತ್ಪನ್ನಗಳು
ಶೇ.5 ತೆರಿಗೆ: ಬಾದಾಮಿ, ಗೋಡಂಬಿ, ಪಿಸ್ತಾ, ಖರ್ಜೂರ, ಸಂಸ್ಕರಿಸಿದ ಸಕ್ಕರೆ ಮತ್ತು ಮಿಠಾಯಿ
►ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ
ಶೂನ್ಯ ಅಥವಾ ಶೇ.5 ತೆರಿಗೆ: ಜೀವ ರಕ್ಷಕ ಔಷಧಿಗಳು,ವೈದ್ಯಕೀಯ ಸಾಧನಗಳು ಮತ್ತು ಪುಸ್ತಕಗಳು
►ಗ್ರಾಹಕ ಬಾಳಿಕೆ ವಸ್ತುಗಳು
ಶೇ.5 ತೆರಿಗೆ: ಹೇರ್ ಆಯಿಲ್,ಶಾಂಪೂ,ಟೂಥ್‌ಪೇಸ್ಟ್ ಮತ್ತು ಡೆಂಟಲ್ ಫ್ಲಾಸ್
ಶೇ.18: ವಾಷಿಂಗ್ ಮಷಿನ್,ಡಿಷ್ ವಾಷರ್ ಮತ್ತು ಟಿವಿ
►ವಾಹನಗಳು
ಶೇ.18 ತೆರಿಗೆ: 350ಸಿಸಿವರೆಗಿನ ಇಂಜಿನ್ ಹೊಂದಿರುವ ಸಣ್ಣ ಕಾರುಗಳು ಮತ್ತು ಬೈಕ್‌ಗಳು
►ವಿಮೆ:
ಶೂನ್ಯ ತೆರಿಗೆ: ಜೀವ ಮತ್ತು ಆರೋಗ್ಯ ವಿಮೆ ಪಾಲಿಸಿಗಳು
ವಸತಿ ಮತ್ತು ನಿರ್ಮಾಣ ಸಾಮಗ್ರಿಗಳಿಗೆ ಶೇ.5
ರಸಗೊಬ್ಬರಗಳು, ಬೀಜಗಳು, ಕ್ರಾಪ್ ಇನ್‌ಪುಟ್ ಶೇ.5
►ಸೇವೆಗಳು:
ಶೇ.5 ತೆರಿಗೆ: 7,500 ರೂ.ಗಿಂತ ಕಡಿಮೆ ಹೊಟೆಲ್ ಶುಲ್ಕಗಳು,ಇಕಾನಮಿ ವಿಮಾನ ಪ್ರಯಾಣ ಟಿಕೆಟ್‌ಗಳು
ಯಾವುದು ದುಬಾರಿ?
ಐಷಾರಾಮಿ ಮತ್ತು ಪಾಪದ ವಸ್ತುಗಳು: ಸಿಗರೇಟ್, ಗುಟ್ಕಾ, ಜರ್ದಾ, ಪಾನ್ ಮಸಾಲಾ ಮತ್ತು ಸಕ್ಕರೆ ಬೆರೆತ ಕಾರ್ಬನೀಕೃತ ಪಾನೀಯಗಳು ಶೇ.40 ತೆರಿಗೆ
ಕಲ್ಲಿದ್ದಲಿನ ಮೇಲಿನ ತೆರಿಗೆಯನ್ನು ಶೇ.5ರಿಂದ ಸೇ.18ಕ್ಕೆ ಹೆಚ್ಚಿಸಲಾಗಿದ್ದು, ಕಲ್ಲಿದ್ದಲು ಆಧಾರಿತ ಉದ್ಯಮಗಳ ವೆಚ್ಚ ಹೆಚ್ಚಲಿದೆ.
350 ಸಿಸಿಗಿಂತ ಹೆಚ್ಚಿನ ಬೈಕ್‌ಗಳು ಮತ್ತು ಲಗ್ಝುರಿ ಕಾರುಗಳ ಮೇಲೆ ಶೇ.40 ತೆರಿಗೆ
ಕ್ಯಾಸಿನೊ, ಕುದುರೆ ರೇಸ್, ಲಾಟರಿ, ಐಪಿಎಲ್ ಟಿಕೆಟ್‌ಗಳ ಮೇಲೆ ಶೇ.40 ತೆರಿಗೆ




