ನವದೆಹಲಿ: ಶೇ. 21ರಷ್ಟು ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದು, 5,204 ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಪೈಕಿ 1,107 ಮಂದಿ ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯಲ್ಲಿ ಹೇಳಲಾಗಿದೆ.
ಬಹುತೇಕ ಅರ್ಧದಷ್ಟು ಮಹಿಳಾ ಜನಪ್ರತಿನಿಧಿಗಳು (ಶೇ. 47) ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದರೆ, ಶೇ. 18ರಷ್ಟು ಪುರುಷ ಜನಪ್ರತಿನಿಧಿಗಳು ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದಾರೆ. ಅರ್ಥಾತ್ 539 ಮಹಿಳಾ ಜನಪ್ರತಿನಿಧಿಗಳ ಪೈಕಿ 251 ಮಂದಿ ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದರೆ, 4,665 ಪುರುಷ ಜನಪ್ರತಿನಿಧಿಗಳ ಪೈಕಿ 856 ಮಂದಿ ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದಾರೆ. ಈ ಲೆಕ್ಕದಲ್ಲಿ ಪುರುಷ ಜನಪ್ರತಿನಿಧಿಗಳಿಗೆ ಹೋಲಿಸಿದರೆ, ವಂಶಪಾರಂಪರ್ಯ ಹಿನ್ನೆಲೆ ಹೊಂದಿರುವ ಮಹಿಳಾ ಜನಪ್ರತಿನಿಧಿಗಳ ಪ್ರಮಾಣ ದುಪ್ಪಟ್ಟಾಗಿದೆ.
ವಂಶಪಾರಂಪರ್ಯ ಹಿನ್ನೆಲೆ ಹೊಂದಿರುವ ಜನಪ್ರತಿನಿಧಿಗಳ ಪೈಕಿ ಉತ್ತರ ಪ್ರದೇಶದಲ್ಲೇ ಅತ್ಯಧಿಕ ಜನಪ್ರತಿನಿಧಿಗಳಿದ್ದಾರೆ (ಶೇ. 23 ಅಥವಾ 604 ಜನಪ್ರತಿನಿಧಿಗಳ ಪೈಕಿ 141). ಆಂಧ್ರಪ್ರದೇಶದಲ್ಲಿ ಶೇ. 34ರಷ್ಟು ಅಥವಾ 255 ಜನಪ್ರತಿನಿಧಿಗಳ ಪೈಕಿ 86 ಮಂದಿ ಇದ್ದಾರೆ. ಇದು ವಂಶಪಾರಂಪರ್ಯ ಹಿನ್ನೆಲೆ ಹೊಂದಿರುವ ಜನಪ್ರತಿನಿಧಿಗಳ ಗರಿಷ್ಠ ಶೇಕಡಾವಾರು ಪ್ರಮಾಣವಾಗಿದೆ. ಇದೇ ವೇಳೆ ಕರ್ನಾಟಕದಲ್ಲಿ ಶೇ. 29ರಷ್ಟು ವಂಶಪಾರಂಪರ್ಯ ಹಿನ್ನೆಲೆ ಹೊಂದಿರುವ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿದ್ದಾರೆ (326ರ ಪೈಕಿ 94 ಮಂದಿ).
1,107 ವಂಶಪಾರಂಪರ್ಯ ರಾಜಕಾರಣಿಗಳ ಪೈಕಿ ಲೋಕಸಭೆಯಲ್ಲಿ ಶೇ. 31ರಷ್ಟು (543 ಸದಸ್ಯರ ಪೈಕಿ 167) ಇದ್ದು, ಶೇ. 22ರಷ್ಟು ವಿಧಾನ ಪರಿಷತ್ ಸದಸ್ಯರು, ಶೇ. 21ರಷ್ಟು ರಾಜ್ಯಸಭಾ ಸದಸ್ಯರು ಹಾಗೂ ಶೇ. 20ರಷ್ಟು ಶಾಸಕರಿದ್ದಾರೆ.
ರಾಷ್ಟ್ರಮಟ್ಟದ ಪಕ್ಷಗಳ ಪೈಕಿ ಕಾಂಗ್ರೆಸ್ ನಲ್ಲಿ ಅತ್ಯಧಿಕ ವಂಶಪಾರಂಪರ್ಯ ರಾಜಕಾರಣಿಗಳಿದ್ದು, ಸಿಪಿಐ(ಎಂ) ಅತ್ಯಂತ ಕನಿಷ್ಠ ಶೇ. 8ರಷ್ಟು ವಂಶಪಾರಂಪರ್ಯ ಜನಪ್ರತಿನಿಧಿಗಳನ್ನು ಹೊಂದಿದೆ (87ರ ಪೈಕಿ 7).
ರಾಜ್ಯಮಟ್ಟದ ಪಕ್ಷಗಳ ಪೈಕಿ ಎನ್ಸಿಪಿ (ಎಸ್ಪಿ)-(ಶೇ. 42), ನ್ಯಾಷನಲ್ ಕಾನ್ಫರೆನ್ಸ್ (ಶೇ. 42), ವೈಎಸ್‌ಆರ್ ಕಾಂಗ್ರೆಸ್ (ಶೇ. 38), ಟಿಡಿಪಿ (ಶೇ. 36) ಹಾಗೂ ಎನ್ಸಿಪಿ (ಶೇ. 34) ವಂಶಪಾರಂಪರ್ಯ ಜನಪ್ರತಿನಿಧಿಗಳನ್ನು ಹೊಂದಿವೆ. ರಾಜ್ಯಮಟ್ಟದ ಪಕ್ಷಗಳಲ್ಲಿ 1,809 ಜನಪ್ರತಿನಿಧಿಗಳಿದ್ದು, ಈ ಪೈಕಿ 406 ಜನಪ್ರತಿನಿಧಿಗಳು ವಂಶಪಾರಂಪರ್ಯ ಹಿನ್ನೆಲೆ ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ತೃಣಮೂಲ ಕಾಂಗ್ರೆಸ್ (ಶೇ. 10) ಹಾಗೂ ಎಐಎಡಿಎಂಕೆ (ಶೇ. 4) ಕನಿಷ್ಠ ವಂಶಪಾರಂಪರ್ಯ ಶೇಕಡಾವಾರು ಪ್ರಮಾಣವನ್ನು ಹೊಂದಿವೆ. ಅಲ್ಲದೆ, ಆರ್ ಜೆ ಡಿ, ಸಮಾಜವಾದಿ ಪಕ್ಷ ಹಾಗೂ ಜೆಡಿಯು ಪಕ್ಷಗಳು ಸುಮಾರು ಶೇ. 30ರಷ್ಟು ವಂಶಪಾರಂಪರ್ಯ ಹಿನ್ನೆಲೆಯ ಜನಪ್ರತಿನಿಧಿಗಳನ್ನು ಹೊಂದಿವೆ.




