ನ್ಯೂಯಾರ್ಕ್: ಆಗ್ನೇಯ ಏಶ್ಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾವಳಿ ನಡೆಸುವ ಆನ್‍ಲೈನ್ ವಂಚನಾ ಕೇಂದ್ರಗಳಿಗೆ ಪೂರ್ವ ಟಿಮೋರ್ ಇತ್ತೀಚಿನ `ಹಾಟ್‍ಸ್ಪಾಟ್' ಆಗಿ ಮಾರ್ಪಟ್ಟಿದೆ ಎಂದು ವಿಶ್ವಸಂಸ್ಥೆಯ `ಡ್ರಗ್ಸ್ ಆಯಂಡ್ ಕ್ರೈಮ್' ವಿಭಾಗ (ಯುಎನ್‍ಒಡಿಸಿ) ಎಚ್ಚರಿಕೆ ನೀಡಿದೆ.
ವಿದೇಶಿ ಹೂಡಿಕೆ ಯೋಜನೆಗಳ ಮೂಲಕ ಅಂತರಾಷ್ಟ್ರೀಯ ಸಂಘಟಿತ ಅಪರಾಧ ಜಾಲಗಳು ಪೂರ್ವ ಟಿಮೋರ್ ನ ವಿಶೇಷ ಆಡಳಿತ ಪ್ರದೇಶ ಒಕಸ್ಸೆ ಅಂಬೆನೋವನ್ನು ಪ್ರವೇಶಿಸಿವೆ ಎಂದು ವಿಶ್ವಸಂಸ್ಥೆ ಗುರುವಾರ ಅಧಿಕೃತ ಎಚ್ಚರಿಕೆ ನೀಡಿದೆ.
ಒಕಸ್ಸೆ ಪೂರ್ವ ಟಿಮೋರ್ ನ ಒಂದು ಭಾಗವಾಗಿದ್ದು ಇದು ಇಂಡೊನೇಶ್ಯಾದ ಭೂಪ್ರದೇಶದಲ್ಲಿದ್ದು ಸವು ಸಮುದ್ರದ ಗಡಿಯಲ್ಲಿದೆ. ಇಲ್ಲಿ ಸರಕಾರವು 2024ರ ಡಿಸೆಂಬರ್ ನಲ್ಲಿ ಡಿಜಿಟಲ್ ಮುಕ್ತ ವ್ಯಾಪಾರ ವಲಯವನ್ನು ಸ್ಥಾಪಿಸಿದೆ. ಆದರೆ ಕಳೆದ ತಿಂಗಳು ಕಾನೂನು ಜಾರಿ ಅಧಿಕಾರಿಗಳು ಇಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಂಚನೆ ಕೇಂದ್ರಗಳ ಚಟುವಟಿಕೆಗಳು ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಲಾದ ಸಿಮ್ ಕಾರ್ಡ್ ಗಳು ಮತ್ತು ಸ್ಟಾರ್‍ಲಿಂಕ್ ಉಪಗ್ರಹ ಸಾಧನಗಳು ಆಗ್ನೇಯ ಏಶ್ಯಾದ್ಯಂತ ವಂಚನೆ ಕೇಂದ್ರಗಳಲ್ಲಿ ಬೆಳಕಿಗೆ ಬಂದಿರುವ ಚಟುವಟಿಕೆಗಳ ಮಾದರಿಯನ್ನು ಹೋಲುತ್ತದೆ. ಅಲ್ಲದೆ ಚೀನಾದ 14ಕೆ ಕ್ರಿಮಿನಲ್ ಗುಂಪಿನೊಂದಿಗಿನ ಸಂಪರ್ಕವೂ ಪತ್ತೆಯಾಗಿದ್ದು ಇಂಡೋನೇಶ್ಯಾ, ಮಲೇಶ್ಯಾ ಮತ್ತು ಚೀನಾದ 30 ಕೆಲಸಗಾರರನ್ನು ಬಂಧಿಸಿರುವುದಾಗಿ ಯುಎನ್‍ಒಡಿಸಿ ಮೂಲಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಕ್ರಿಮಿನಲ್ ಗ್ಯಾಂಗ್ ಗಳು ಸಾಮಾನ್ಯವಾಗಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ರೂಪಿಸಲಾದ ವಿಶೇಷ ಆರ್ಥಿಕ ವಲಯದ ಲಾಭವನ್ನು ಪಡೆದುಕೊಳ್ಳುತ್ತವೆ ಮತ್ತು ನಕಲಿ ಸಂಸ್ಥೆಗಳ ಮೂಲಕ ಕ್ರಿಮಿನಲ್ ಉದ್ಯಮವನ್ನು ಸ್ಥಾಪಿಸುತ್ತಾರೆ. ಅಕ್ರಮ ಜೂಜಾಟ, ಆನ್‍ಲೈನ್ ಪ್ರಣಯ ಸಂಭಾಷಣೆ, ದೀರ್ಘಾವಧಿಯ ಹೂಡಿಕೆ ವಂಚನೆಯ ಮೂಲಕ ಕೋಟ್ಯಾಂತರ ಹಣವನ್ನು ಗಳಿಸುತ್ತಾರೆ. ಜೊತೆಗೆ ಮಾನವ ಕಳ್ಳಸಾಗಣೆ, ಉದ್ಯೋಗದ ಆಮಿಷವೊಡ್ಡಿ ವಿಶ್ವದಾದ್ಯಂತದ ಕೆಲಸಗಾರರನ್ನು ಕರೆಸಿಕೊಂಡು ಅವರನ್ನು ಕ್ರಿಮಿನಲ್ ಚಟುವಟಿಕೆಗಳಿಗೆ ಬಲವಂತವಾಗಿ ಬಳಸಿಕೊಳ್ಳುವ ಕೃತ್ಯ ನಡೆಯುತ್ತಿದೆ ಎಂದು ವರದಿ ಹೇಳಿದೆ.




