ಕಾಸರಗೋಡು: ಮಹಾನವರಾತ್ರಿ ಮಹೋತ್ಸವ ಸಂದರ್ಭ ಸೆ. 29ರಿಂದ ಶ್ರೀ ಶಾರದಾಪೂಜೆ ನಡೆಯಲಿದ್ದು, 30ರಂದು ಸರಸ್ವತೀ ಪೂಜೆ ಆಚರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗೆ ರಜೆ ಘೋಷಿಸುವಂತೆ ಕಾಸರಗೋಡು ಬ್ರಾಹ್ಮಣ ಮಹಾ ಸಭಾ ಸರ್ಕಾರವನ್ನು ಆಗ್ರಹಿಸಿದೆ.
ಶಾರದಾಪೂಜೆ(ಸರಸ್ವತೀ ಪೂಜೆ)ಅನ್ವಯ ಸೆ. 29ರ ಸಂಜೆಯಿಂದಲೇ ಗ್ರಂಥಗಳು, ಪುಸ್ತಕ ಸೇರಿದಂತೆ ಪಠ್ಯ ಸಲಕರಣೆಗಳನ್ನು ಪೂಜೆಗಿರಿಸಬೇಕಾಗುತ್ತಿದ್ದು, ನಂತರ ಅ. 2ರಂದು ಶಾರದಾ ವಿಸರ್ಜನೆ ನಂತರವಷ್ಟೆ ಇವುಗಳನ್ನು ತೆಗೆಯುವ ಸಂಪ್ರದಾಯವಿದೆ. ಈ ಸಂಪ್ರದಾಯವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಸೆ. 29ರಂದು ಪುಸ್ತಕ ಪೂಜೆಗಿರಿಸಿದರೆ, 30ರಂದು ಪುಸ್ತಕಗಳನ್ನು ಹೊರತೆಗೆಯುವುದು ಪೂಜಾವಿಧಿಗೆ ಅಡಚಣೆಯಾಗುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಯ ದಿವಾಗಿರುವ ಸೆ. 30ನ್ನು ಸಾರ್ವಜನಿಕ ರಜೆಯನ್ನಾಗಿ ಘೋಷಿಸಬೇಕು. ಅ. 1ರಂದು ಮಹಾನವಮಿ ಹಾಗೂ 2ರಂದು ಗಾಂಧೀ ಜಯಂತಿ ಅನ್ವಯ ಸಾರ್ವಜನಿಕ ರಜೆಯಿರುವುದರಿಂದ ಸೆ. 30ರಂದು ಸರ್ಕಾರ ವಿಶೇಷವಾಗಿ ವಿದ್ಯಾಭ್ಯಾಸ ಇಲಾಖೆಗೆ ರಜೆ ಮಂಜೂರುಗೊಳಿಸಬೇಕು. ಈ ಮೂಲಕ ಹಿಂದೂಮತ ವಿಶ್ವಾಸಿಗಳ ಆಚಾರ ಅನುಷ್ಠಾನ ಸಂರಕ್ಷಿಸಲು ಸರ್ಕಾರ ಮುಂದಾಗಬೇಕು ಎಂಬುದಾಗಿ ಬ್ರಾಹ್ಮಣ ಮಹಾಸಭಾ ಕಾಸರಗೋಡು ಘಟಕದ ಆಡಳಿತಾಧಿಕಾರಿ ಹಾಗೂ ಕನ್ವೀನರ್ ಜಯನಾರಾಯಣ ತಾಯನ್ನೂರ್ ರಾಜ್ಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.




