HEALTH TIPS

ವಂಚಕರಿಗೆ ಬ್ಯಾಂಕ್ ಖಾತೆ ಬಾಡಿಗೆಗೆ ನೀಡಿದ್ದ ವಯನಾಡಿನ 500ಕ್ಕೂ ಅಧಿಕ ಜನರಿಗೆ ಸಂಕಷ್ಟ

ವಯನಾಡ್: ವಯನಾಡು ಜಿಲ್ಲೆಯಲ್ಲಿ ಹೆಚ್ಚಾಗಿ ಯುವಕರು ಮತ್ತು ಮಹಿಳೆಯರು ಸೇರಿದಂತೆ 500ಕ್ಕೂ ಅಧಿಕ ಜನರು 'ಮ್ಯೂಲ್ ಅಕೌಂಟ್' ವಂಚನೆಗೆ ಬಲಿಯಾಗಿದ್ದಾರೆ ಎಂದು ಸೈಬರ್ ಪೋಲಿಸ್ ಮೂಲಗಳು ಮಂಗಳವಾರ ಇಲ್ಲಿ ತಿಳಿಸಿವೆ.

ತನಿಖಾಧಿಕಾರಿಗಳ ಪ್ರಕಾರ, ಜಿಲ್ಲೆಯ ಹೊರಗಿನ ವಂಚಕರು ಸ್ಥಳೀಯ ನಿವಾಸಿಗಳಿಗೆ ಹಣದ ಆಮಿಷವನ್ನೊಡ್ಡಿ ಅವರ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದುಕೊಂಡು ಬಳಿಕ ಅಕ್ರಮ ವಹಿವಾಟುಗಳು ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವುಗಳ ದುರ್ಬಳಕೆ ಮಾಡಿಕೊಂಡಿದ್ದಾರೆ.

ವಯನಾಡಿನ ಹಲವಾರು ಬ್ಯಾಂಕ್ ಖಾತೆದಾರರು ಈಗ ಉತ್ತರ ಮತ್ತು ಈಶಾನ್ಯ ಭಾರತದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಇಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಕನಿಷ್ಠ ಆರು ಜನರು ಕಂಬಳಕ್ಕಾಡ್ ಪೋಲಿಸ್ ಠಾಣಾ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಈ ಪೈಕಿ ಇಸ್ಮಾಯೀಲ್ (27) ಎಂಬಾತನನ್ನು ಈಗಾಗಲೇ ನಾಗಾಲ್ಯಾಂಡ್ ಪೋಲಿಸರು ಬಂಧಿಸಿ ಕೊಹಿಮಾಕ್ಕೆ ಕರೆದೊಯ್ದಿದ್ದಾರೆ. ಇನ್ನೋರ್ವ ಯುವಕ ಮುಹಮ್ಮದ್ ಫಾನಿಷ್ ಎಂಬಾತನ ಖಾತೆಯ ಮೂಲಕ 58,000 ರೂ.ಗಳ ವಹಿವಾಟನ್ನು ನಡೆಸಿದ ಇಂತಹುದೇ ಪ್ರಕರಣದಲ್ಲಿ ಡೆಹ್ರಾಡೂನ್ ಪೋಲಿಸರು ಆತನಿಗೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಸೈಬರ್ ಪೋಲಿಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸ್ಥಳೀಯ ನಿವಾಸಿ ಸಲ್ಮತ್ ಎಂಬಾಕೆಯ ಬ್ಯಾಂಕ್ ಖಾತೆಯ ವಿವರಗಳನ್ನು ಆಕೆಯ ಕಿರಿಯ ಸೋದರ ವಂಚಕರೊಂದಿಗೆ ಹಂಚಿಕೊಂಡ ಬಳಿಕ ಆಕೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ವಂಚಕರು ಈ ಖಾತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

500ಕ್ಕೂ ಅಧಿಕ ಯುವಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡಿ ವಂಚನೆಯ ಬಲಿಪಶುಗಳಾಗಿದ್ದಾರೆ.

ವಂಚಕರು ಪ್ರತಿ ಖಾತೆಗೆ 5,000 ರೂ.ಗಳಿಂದ 10,000 ರೂ.ವರೆಗೆ ಪಾವತಿಸಿದ್ದರು.ಆದರೆ ವಂಚನೆ ಸಂಬಂಧಿತ ಪ್ರಕರಣಗಳು ದಾಖಲಾದ ಬಳಿಕ ಖಾತೆದಾರರು ಪೋಲಿಸ್ ಕ್ರಮವನ್ನು ಎದುರಿಸುತ್ತಿದ್ದಾರೆ.

ನೆರೆಯ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿಯೂ ಇಂತಹ ವಂಚನೆ ಘಟನೆಗಳು ವರದಿಯಾಗಿವೆ ಎಂದು ಪೋಲಿಸರು ತಿಳಿಸಿದರು.

'ನಾಗಾಲ್ಯಾಂಡ್ ಪೋಲಿಸರು ಎಂಟು ದಿನಗಳ ಹಿಂದೆ ಇಸ್ಮಾಯೀಲ್‌ ನನ್ನು ವಶಕ್ಕೆ ತೆಗೆದುಕೊಂಡಿದ್ದು,ಆಗಿನಿಂದ ಆತನ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆತನ ಹಣಕಾಸು ವಹಿವಾಟುಗಳ ಬಗ್ಗೆ ನಮಗೇನೂ ತಿಳಿದಿಲ್ಲ. ಆತನ ಖಾತೆಯ ಮೂಲಕ 12 ಲಕ್ಷ ರೂಪಾಯಿಗಳ ಅಕ್ರಮ ವಹಿವಾಟುಗಳು ನಡೆದಿವೆ ಎಂದು ಪೋಲಿಸರು ನಮಗೆ ತಿಳಿಸಿದ್ದಾರೆ. ಆತನಿಗೆ ಜಾಮೀನು ಪಡೆಯಲೂ ನಮ್ಮ ಬಳಿ ಹಣವಿಲ್ಲ. ಏನು ಮಾಡಬೇಕು ಎಂದು ನಮಗೆ ಗೊತ್ತಾಗುತ್ತಿಲ್ಲ ' ಎಂದು ಕುಟುಂಬದ ಹಿರಿಯರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ವಯನಾಡಿನಲ್ಲಿ ಮಧ್ಯವರ್ತಿಗಳು ಸಕ್ರಿಯರಾಗಿದ್ದು, ಹೆಚ್ಚಿನ ಬೆಲೆಗೆ ಬ್ಯಾಂಕ್ ಖಾತೆಗಳನ್ನು ಖರೀದಿಸುವ ಅಥವಾ ಬಾಡಿಗೆಗೆ ಪಡೆಯುವ ಆಮಿಷಗಳೊಂದಿಗೆ ಸ್ಥಳೀಯರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಿದ ಕಂಬಳಕ್ಕಾಡಿನ ಯುವಕನೋರ್ವ, 'ಅವರು ನಮಗೆ ಹಣವನ್ನು ನೀಡಿ ನಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಇತರ ವಿವರಗಳು ಮತ್ತು ಒಟಿಪಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಪೋಲಿಸರು ಬಾಗಿಲು ಬಡಿದ ನಂತರವೇ ಇದೊಂದು ವಂಚನೆಯ ಜಾಲ ಎನ್ನುವುದು ನಮಗೆ ಗೊತ್ತಾಗಿದೆ 'ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries