ಕಾಸರಗೋಡು: ಜಿಲ್ಲೆಗೆ ಹೊಸದಾಗಿ ಮಂಜೂರುಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಪಡೆದುಕೊಳ್ಳುತ್ತಿದ್ದಂತೆ ಎಂಬಿಬಿಎಸ್ ತರಗತಿ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಈ ವರ್ಷ 50 ಎಂಬಿಬಿಎಸ್ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲಿದ್ದು, ಸೆಪ್ಟೆಂಬರ್ 22 ರಿಂದ ತರಗತಿ ಆರಂಭಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಆಹಾರ ಸೌಲಭ್ಯ ಒದಗಿಸಲು ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಮಿನಿ ಕೆಫೆಟೇರಿಯಾವನ್ನು ಪ್ರಾರಂಭಿಸಲು ಕುಟುಂಬಶ್ರೀ ಮಿಷನ್ ಈಗಾಗಲೇ ಸಿದ್ಧತೆ ನಡೆಸಿದೆ. ಕ್ಯಾಂಪಸ್‍ನೊಳಗೆ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ ಪೂರ್ಣಗೊಂಡಿದ್ದು, ವಿದ್ಯುದೀಕರಣ ಕಾರ್ಯ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿಕೊಡಲು ಸರ್ಕಾರ ಸಿದ್ಧತೆ ನಡೆಸಿದೆ.
ಇನ್ನು ಕ್ಯಾಂಪಸ್‍ನಲ್ಲಿ ಪೆÇಲೀಸ್ ಸಹಾಯಕ ಹುದ್ದೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭರತ್ ರೆಡ್ಡಿ ಈಗಾಗಲೇ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಕಾಲೇಜಿಗೆ ಸನಿಹದ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವ ಹಾಗೂ ಮತ್ತಷ್ಟು ಈ ಸೇವೆಗಳಿಗೆ ಅನುಮತಿ ನೀಡುವ ಜವಾಬ್ದಾರಿ ಬಗ್ಗೆ ಮೋಟಾರು ವಾಹನ ಇಲಾಖೆ ಮುಂದೆ ಬಂದಿದೆ. ಕಾಸರಗೋಡು ಹಾಗೂ ಕುಂಬಳೆಗೆ ಮತ್ತಷ್ಟು ಬಸ್ ಸಂಚಾರ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 24 ರಂದು ಸಂಜೆ 4ಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಬಸ್ ಮಾಲೀಕರ, ಕ್ಯಾಬ್ ಸಂಘದ ಪ್ರತಿನಿಧಿಗಳ ಸಭೆ ನಡೆಸಲೂ ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ವಿವಿಧ ಇಲಾಖೆಗಳ ಪ್ರಯೋಗಾಲಯ ಸೌಲಭ್ಯಗಳನ್ನು ನವೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕೆಎಂಎಸ್‍ಸಿಎಲ್ ಪ್ರತಿನಿಧಿ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಕಾಲೇಜು ಆಸುಪಾಸು ಬೀದಿ ದೀಪ ಅಳವಡಿಸಲು ಜನಪ್ರತಿನಿಧಿಗಳ ಅನುದಾನ ಬಳಸಿಕೊಳ್ಳಲೂ ತೀರ್ಮಾನಿಸಲಾಗಿದೆ. ಸ್ಥಳೀಯಾಡಳಿತ ಇಲಾಖೆ ನೇತೃತ್ವದಲ್ಲಿ, ಬದಿಯಡ್ಕ ಗ್ರಾಮ ಪಂಚಾಯಿತಿಯ ಇಬ್ಬರು ಹಸಿರು ಕ್ರಿಯಾ ಸೇನೆಯ ಸದಸ್ಯರನ್ನು ತ್ಯಾಜ್ಯ ವಿಲೇವಾರಿಗಾಗಿ ಶಾಶ್ವತ ಆಧಾರದ ಮೇಲೆ ವೈದ್ಯಕೀಯ ಕಾಲೇಜಿಗೆ ನಿಯೋಜಿಸಲಾಗುವುದು. ಕ್ಯಾಂಪಸ್‍ನಲ್ಲಿ ಮಿನಿ ಎಂಸಿಎಫ್, ತ್ಯಾಜ್ಯ ಸುರಿಯುವ ತೊಟ್ಟಿಗಳ ಅಳವಡಿಕೆ ಸೇರಿದಂತೆ ಮಾದರಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಜಾರಿಗೆ ಸ್ಥಳೀಯಾಡಳಿತ ಕೈಜೋಡಿಸಲಿದೆ.
ಈ ಬಗ್ಗೆ ಶುಚಿತ್ವ ಮಿಷನ್‍ನ ನಿರ್ದೇಶಕರು ಮತ್ತು ಜಿಲ್ಲಾ ಸಂಯೋಜಕರಿಗೆ ಸೂಚನೆಗಳನ್ನು ನೀಡಲಾಗಿದೆ. ಚೆರ್ಕಳದಿಂದ ಉಕಿನಡ್ಕ ವರೆಗಿನ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ಪ್ರಸಕ್ತ ರಸ್ತೆಯನ್ನು ನವೀಕರಿಸಲು ಕೆಆರ್‍ಎಫ್‍ಬಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಸ್‍ಬಿಐ ಮತ್ತು ಕೆನರಾ ಬ್ಯಾಂಕ್‍ನಂತಹ ಸಂಸ್ಥೆಗಳು ವೈದ್ಯಕೀಯ ಕಾಲೇಜಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡಲೂ ಮುಂದೆ ಬಂದಿದೆ. ವೈದ್ಯಕೀಯ ಕಾಲೇಜಿನಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೆಎಸ್‍ಇಬಿಗೆ ಸೂಚಿಸಲಾಗಿದೆ.
2013ರಲ್ಲಿ ನಡೆದಿತ್ತು ಶಿಲಾನ್ಯಾಸ:
ಊಮನ್‍ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರದ ಕಾಲಾವಧಿಯಲ್ಲಿ 2013ರ ನ. 30ರಂದು ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನಡೆದಿದ್ದು, 2016ರ ವೇಳೆಗೆ ಪೂರ್ಣಪ್ರಮಾಣದಲ್ಲಿ ಕಾಮಗಾರಿ ಆರಂಭಿಸಲಾಗಿದೆ. 2018 ನ. 25ರಂದು ಹೊಸ ಬ್ಲಾಕ್‍ಗಳ ನಿರ್ಮಾಣಕಾರ್ಯಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದ್ದರು. ಆಡಳಿತಾತ್ಮಕ ಕಟ್ಟಡ, ಸ್ಟೂಡೆಂಟ್ ಹಾಸ್ಟೆಲ್, ಅಧ್ಯಾಪಕರ ವಸತಿ ಕಟ್ಟಡದ ಕಾಮಗಾರಿ ಬಹುತೇಕ ಪೂರ್ತಿಗೊಂಡಿದ್ದರೂ, ಆಸ್ಪತ್ರೆ ಕಟ್ಟಡ ಸಮುಚ್ಛಯದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿತ್ತು. ಗುತ್ತಿಗೆದಾರಗೆ ಹಣ ಲಭಿಸದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಸುಮಾರು ಮೂರು ಕೋಟಿ ರೂ. ಮೊತ್ತ ಗುತ್ತಿಗೆದಾರನಿಗೆ ಬಾಕಿಯಿರಿಸಲಾಗಿತ್ತು. ಈ ಬಗ್ಗೆ ಗುತ್ತಿಗೆದಾರ ನ್ಯಾಯಾಲಯ ಪ್ರವೇಶಿಸುತ್ತಿದ್ದಂತೆ ಸರ್ಕಾರ, 56ಕೋಟಿ ರೂ. ಬಿಡುಗಡೆಮಾಡಿದ್ದು, ಪ್ರಸಕ್ತ ಹೊಸ ಗುತ್ತಿಗೆದಾರನ ಮೂಲಕ ಉಳಿದ ಕಾಮಗಾರಿ ನಡೆಯಲಿದೆ.
ಈಗಾಗಲೇ 60ಸೀಟುಗಳೊಂದಿಗೆ ಸರ್ಕಾರಿ ನರ್ಸಿಂಗ್ ತರಗತಿ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರಂಭಗೊಂಡಿದೆ. ಮೊದಲ ವರ್ಷದ ಸಿಲೆಬಸ್ ಪ್ರಕಾರ ಥಿಯರಿ ತರಗತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದ್ದು, ಉಕ್ಕಿನಡ್ಕದಲ್ಲಿ ಕಟ್ಟಡ ಕಾಮಗಾರಿ ಪೂರ್ತಿಗೊಂಡ ತಕ್ಷಣ ಪೂರ್ಣಪ್ರಮಾಣದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಚಟುವಟಿಕೆ ನಡೆಸಲಿದೆ. ಕಾಸರಗೋಡು ಜತೆಗೆ ವಯನಾಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಎಂಬಿಬಿಎಸ್ ತರಗತಿ ಆರಂಭಿಸಲು ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಲಭಿಸಿದೆ.






