ಕಾಸರಗೋಡು: ಮತ ಕಳ್ಳತನದ ವಿರುದ್ಧದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಮಸ್ತ ಭಾರತದ ಜನತೆ ಬೆಂಬಲವನ್ನು ನೀಡುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ, ಶಾಸಕ ಸನ್ನಿ ಜೋಸೆಫ್ ತಿಳಿಸಿದ್ದಾರೆ.
ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗ ಮತ ಯಂತ್ರದಲ್ಲಿ ನಡೆಸುತ್ತಿದ್ದಾರೆನ್ನಲಾದ ಅಕ್ರಮದ ವಿರುದ್ಧ ಎಐಸಿಸಿಯ ಆಹ್ವಾನದನ್ವಯ ದೇಶಾದ್ಯಂತ 5 ಕೋಟಿ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸುವ ಸಹಿ ಸಂಗ್ರಹ ಅಭಿಯಾನದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಸಹಿ ಸಂಗ್ರಹಿಸಲಾಯಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನಕ್ಕೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮೊದಲ ಸಹಿ ಹಾಕಿದರು. ಮುಖಂಡರಾದ ಎ ಗೋವಿಂದನ್ ನಾಯರ್ ಪೆರಿಯ, ಹಕೀಂ ಕುನ್ನಿಲ್, ಕೆ ನೀಲಕಂಠನ್, ಕೆ ವಿ ಗಂಗಾಧರನ್, ಶಾಂತಮ್ಮ ಫಿಲಿಪ್, ಮೀನಾಕ್ಷಿ ಬಾಲಕೃಷ್ಣನ್, ಸಾಜಿದ್ ಮವ್ವಲ್, ಜೇಮ್ಸ್ ಪಂದಕ್ಕಲ್, ವಕೀಲ ಕೆ ಕೆ ರಾಜೇಂದ್ರನ್, ಬಿ ಪಿ ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಭಾಕರನ್ ಸ್ವಾಗತಿಸಿದರು.





