HEALTH TIPS

ಭೂಸ್ವಾಧೀನ ಕಾಯ್ದೆ | ಸುಪ್ರೀಂ ಕೋರ್ಟ್‌ನಲ್ಲಿ 538 ಪ್ರಕರಣಗಳ ವಿಚಾರಣೆ

ನವದೆಹಲಿ: ವಿವಿಧ ಅಭಿವೃದ್ಧಿ ಯೋಜನೆಗಳಿಗೆ 1894ರ ಭೂಸ್ವಾಧೀನ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವ ಪ್ರಕರಣಗಳಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಮುಖ ಸೆಕ್ಷನ್‌ಗಳು ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಭೂಪರಿಹಾರ ನಿಗದಿ ಸಂಬಂಧ ಸಲ್ಲಿಕೆಯಾಗಿರುವ 538 ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್‌ ಹಾಗೂ ಸತೀಶ್ ಚಂದ್ರ ಶರ್ಮಾ ಪೀಠ ಬುಧವಾರ ನಡೆಸಿತು. ಬಹುತೇಕ ಅರ್ಜಿಗಳು ಕರ್ನಾಟಕದಿಂದಲೇ ಸಲ್ಲಿಕೆಯಾಗಿವೆ. ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದ ಮಂಡಿಸಿದರು.

2013ರ ಕಾಯ್ದೆಯ ಸೆಕ್ಷನ್ 25-30 ಮಾತ್ರ ಪರಿವರ್ತನೆಯಲ್ಲಿನ ಸ್ವಾಧೀನಗಳಿಗೆ ಅನ್ವಯವಾಗುತ್ತದೆ. 2013ರ ಕಾಯ್ದೆಯ ಉಳಿದ ಸೆಕ್ಷನ್‌ಗಳ ಅಡಿಯಲ್ಲಿ ಹೆಚ್ಚುವರಿ ಪರಿಹಾರಗಳನ್ನು ಒದಗಿಸಲಾಗದು. ಹೀಗಾಗಿ, ಯಾವುದೇ ಮೇಲ್ಮನವಿಯನ್ನು 1894ರ ಕಾಯ್ದೆ ಅನುಸಾರ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ ವಾದಿಸಿದೆ.

ಮೂಲ ‍ಪ್ರಕರಣವೇನು?: ಬೆಂಗಳೂರಿನ ಬಿನ್ನಿ ಮಿಲ್‌ ರಸ್ತೆ ವಿಸ್ತರಣೆಗಾಗಿ ಎಸ್‌.ವಿ.ಗ್ಲೋಬಲ್‌ ಮಿಲ್‌ ಲಿಮಿಟೆಡ್‌ನ 3.16 ಎಕರೆ ಸ್ವಾಧೀನಪಡಿಸಿಕೊಳ್ಳಲು ಬಿಬಿಎಂಪಿ 2010ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2013ರ ನವೆಂಬರ್‌ನಲ್ಲಿ ಅಂತಿಮ ಅಧಿಸೂಚನೆ ಪ್ರಕಟವಾಗಿತ್ತು. 2014ರ ಜನವರಿ 14ರಂದು ಜಾಗ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಹೊಸ ಕಾಯ್ದೆ 2014ರ ಜನವರಿ 1ರಂದು ಜಾರಿಗೆ ಬಂದಿತ್ತು. ಚದರ ಅಡಿಗೆ ₹4,620 ನಿಗದಿಪಡಿಸಲಾಗಿತ್ತು.

2013ರ ಕಾಯ್ದೆಯ ಸೆಕ್ಷನ್‌ 64ರ ಅಡಿಯಲ್ಲೇ ಭೂಪರಿಹಾರ ನಿಗದಿಪ‍ಡಿಸಬೇಕು ಎಂದು ಒತ್ತಾಯಿಸಿ ಕಂಪನಿಯು ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಚದರ ಅಡಿಗೆ ₹8,624 ನಿಗದಿಪಡಿಸಿ 2018ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ ಮೊರೆ ಹೋಗಿತ್ತು. ರಾಜ್ಯ ಸರ್ಕಾರವು ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಹೈಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಜಲಸಂಪನ್ಮೂಲ ಇಲಾಖೆಯ ಭೂ ಪರಿಹಾರಕ್ಕೆ ಸಂಬಂಧಿಸಿದ ಅನೇಕ ಅರ್ಜಿಗಳು ಸಹ ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಲಾಗುತ್ತಿದೆ. ಗುರುವಾರವೂ ವಿಚಾರಣೆ ಮುಂದುವರಿಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries