ಮುಂಬೈ: ಉದ್ಯಮಿ ದೀಪಕ್ ಕೊಠಾರಿ ಅವರಿಗೆ ₹ 60.4 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ನಟಿ ಶಿಲ್ಪಾಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ ಎಂದು ಶುಕ್ರವಾರ ವರದಿಯಾಗಿದೆ.
'ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್'ಗೆ ಸಂಬಂಧಿಸಿದಂತೆ ಬಹುಕೋಟಿ ಮೊತ್ತದ ಸಾಲ ಮತ್ತು ಹೂಡಿಕೆಯಲ್ಲಿ ಕೊಠಾರಿ ಅವರಿಗೆ ವಂಚಿಸಲಾಗಿದೆ ಎಂಬ ಆರೋಪ ಸಂಬಂಧ ಜುಹು ಪೊಲೀಸ್ ಠಾಣೆಯ ಆರ್ಥಿಕ ವಂಚನೆ ವಿಭಾಗದಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
ಆದರೆ, ಆರೋಪಗಳನ್ನು ಅಲ್ಲಗಳೆದಿರುವ ಶಿಲ್ಪಾ ಹಾಗೂ ರಾಜ್ ಪರ ವಕೀಲರು, ಇವು 'ಆಧಾರರಹಿತ ಮತ್ತು ದುರುದ್ದೇಶಪೂರಿತ' ಎಂದು ಪ್ರತಿಕ್ರಿಯಿಸಿದ್ದರು. ಹಾಗೆಯೇ, 'ಬಹಳ ಹಿಂದೆ ವ್ಯವಹಾರ ನಡೆದಿತ್ತು. ಕಂಪನಿಯು ಆರ್ಥಿಕ ಸಂಕಷ್ಟ ಎದುರಿಸಿತ್ತು ಮತ್ತು ದೀರ್ಘಕಾಲದ ಕಾನೂನು ಸಂಘರ್ಷ ಎದುರಿಸುತ್ತಿತ್ತು' ಎಂದು ತಿಳಿಸಿದ್ದರು.
ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.




