ಇಂಫಾಲ್: ಜನಾಂಗೀಯ ಸಂಘರ್ಷ ಆರಂಭಗೊಂಡು ಎರಡಕ್ಕೂ ಹೆಚ್ಚು ವರ್ಷಗಳ ಬಳಿಕ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಭೇಟಿ ನೀಡಿದ್ದಾರೆ.
ಕುಕಿ ಸಮುದಾಯದ ಜನರು ಹೆಚ್ಚಿರುವ ಚುರಾಚಾಂದಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ₹7,300 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಮಣಿಪುರದಲ್ಲಿ ಅಂದಾಜು ₹8,500 ಕೋಟಿ ಮೊತ್ತದ 31 ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಅವರು ನೆರವೇರಿಸಲಿದ್ದಾರೆ. ಮಣಿಪುರದಿಂದ ಹೊರಟು ಮೋದಿ ಅವರು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.
ರಾಜ್ಯದಲ್ಲಿ ಬುಡಕಟ್ಟು ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ 2023ರಲ್ಲಿ ನಡೆದ ಜನಾಂಗೀಯ ಸಂಘರ್ಷದಲ್ಲಿ ಸುಮಾರು 260 ಮಂದಿ ಮೃತಪಟ್ಟಿದ್ದರು. ಇಷ್ಟೆಲ್ಲಾ ಹಿಂಸಾಚಾರ ನಡೆದರೂ ಪ್ರಧಾನಿ ಮೋದಿ ಅವರು ಸಂಘರ್ಷ ಪೀಡಿತ ರಾಜ್ಯಕ್ಕೆ ಭೇಟಿ ನೀಡಲು ಮನಸ್ಸು ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿದ್ದವು.




